ಬೆಡಗಿನ ತಾಣ ಜಯಪುರ
ಅಭ್ಯಾಸ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
1. ರೈಗಳ ಮನೆ ಎಂಥ ಪ್ರದೇಶದಲ್ಲಿತ್ತು?
ಉತ್ತರ:-ಊರ ಹೊರಗೆ ಸುತ್ತಲೂ, ಉಸುಬು ಹರಡಿದ್ದ ಮರುಭೂಮಿಯಲ್ಲಿ ರೈಗಳ ಮನೆ ಇತ್ತು.
2. ಲೇಖಕರಿಗೆ ಜಯಪುರದ ಮನೆಗಳ ಮೇಲೆ ಮೋಹವೇಕೆ?
ಉತ್ತರ:-ಜಯಪುರದ ವಾಸ್ತು ರಚನೆ, ದೇಶಿಯ ಶೈಲಿಯದ್ದು, ಅಲ್ಲಿಯ ಒಂದೊಂದು ಮನೆಯೂ, ಒಂದೊಂದು ಶೈಲಿಯದ್ದೂ, ಒಂದೊಂದು ದೇಶದ್ದೂ ಆಗಿ ಕಾಣಿಸುವುದಿಲ್ಲ. ಆದ್ದರಿಂದಲೇ ಲೇಖಕರಿಗೆ ಜಯಪುರದ ಮನೆಗಳ ಮೇಲೆ ಮೋಹ.
3. ಜಯಪುರದ ಜನರಿಗೆ ಯಾವ ಯಾವ ಬಣ್ಣಗಳು ಇಷ್ಟ?
ಉತ್ತರ:-ಕೆಂಪು, ಕಿತ್ತಲೆ, ಹಳದಿ ಬಣ್ಣಗಳೆಂದರೆ ಜಯಪುರದ ಜನರಿಗೆ ತುಂಬಾ ಇಷ್ಟ.
4. ಜಯಪುರದ ರಾಜಧಾನಿ ಯಾವುದು?
ಉತ್ತರ:-ಅಂಬೇರ ಜಯಪುರದ ರಾಜಧಾನಿ
5. ಲೇಖಕರಿಗಿದ್ದ ಹಂಬಲವೇನು?
ಉತ್ತರ:-ಜಯಪುರದ ಜಾನಪದ ನೃತ್ಯಗಳನ್ನು ನೋಡಬೇಕೆಂಬುದು ಲೇಖಕರ ಹಂಬಲವಾಗಿತ್ತು.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು- ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ:
1. ಜಯಪುರದ ಬೀದಿ ಹಾಗೂ ಮನೆಗಳ ಸೌಂದರ್ಯ ವನ್ನೂ ವರ್ಣಿಸಿ.
ಉತ್ತರ:-ಜಯಪುರದ ಬೀದಿಗಳು ನೇರವಾದವು ಹಾಗೂ ಅಗಲವಾದವುಗಳು, ಬಹುದೂರದಿಂದ ಕಾಣಿಸುವ ಅಂಗಡಿ ಮನೆಗಳ ದೇಶಿ- ವಾಸ್ತು ರಚನೆ ಚೆನ್ನಾಗಿ ಶೋಭಿಸುತ್ತದೆ. ಇದು ದೇಶಿ ಶೈಲಿಯದ್ದಾಗಿದೆ, ಮುಖ್ಯ ಬೀದಿಗಳಲ್ಲಿ ಸಂಧಿಸುವಲ್ಲಿ ಸುಂದರವಾದ ಚೌಕಗಳಿವೆ, ಕೆಲವೊಂದು ಕಡೆ ಮಹಾದ್ವಾರಗಳಿವೆ.
2. ಲೇಖಕರ ಮೊದಲ ಅಂಬೇರ ಭೇಟಿಗೂ ಇತ್ತೀಚಿನ ಭೇಟಿಗೂ ಯಾವ ವ್ಯತ್ಯಾಸವಿತ್ತು?
ಉತ್ತರ:-ಲೇಖಕರ ಮೊದಲ ಅಂಬೇರ ಭೇಟಿಗೂ, ಹದಿನೈದು ವರ್ಷಗಳ ನಂತರದ ಭೇಟಿಗೂ ಸಾಕಷ್ಟು ವ್ಯತ್ಯಾಸಗಳಿದ್ದವು. ಹಿಂದೆ ಬಸ್ ಸೌಕರ್ಯವಿರಲಿಲ್ಲ. ಅಲ್ಲಿನ ಹಲವಾರು ಗುಡಿ ಗೋಪುರಗಳು ಗೂಬೆಯ ಮನೆಗಳಾಗಿದ್ದವು. ಈಗ ಹಾಗಿಲ್ಲ ನೂರಾರು ಸಿಂಧಿ ಕುಟುಂಬಗಳು ಅಲ್ಲಿ ಮನೆ ಮಾಡಿಕೊಂಡಿದ್ದವು.
3. ಮೀರಬಾಯಿ ದೇವಾಲಯದ ಸೌಂದರ್ಯವನ್ನೂ ವಿವರಿಸಿ.
ಉತ್ತರ:-ಮೀರಾಬಾಯಿ, ಗಿರಿಧರನಾಗರನನ್ನು (ಕೃಷ್ಣನನ್ನು) ಪೂಜಿಸುವ ಸ್ಥಳ ಅಲ್ಲಿದೆ. ಕೆಳಗಿಳಿದು ಹೋಗಿ ಗುಡಿಯನ್ನು ನೋಡಿದರೆ ಅದರ ಸೊಬಗು ಚೆನ್ನಾಗಿ ಕಾಣುತ್ತದೆ. ನಕ್ಷತ್ರಾಕೃತಿಯನ್ನು ಹೊಂದಿರುವ ಗರ್ಭಗೃಹ, ನವರಂಗಗಳಿವೆ, ಗುಡಿ ಆವರಣ ಬಹಳ ಸೊಗಸಾಗಿದೆ.
4. ಲೇಖಕರು ನೋಡಿದ ಜನಪದ ನೃತ್ಯದ ಸೊಬಗನ್ನು ಚಿತ್ರಿಸಿ.
ಉತ್ತರ:-ಮೂಲತಃ ಮೈಸೂರಿನವರಾದ, ಈಗ ಜಯಪುರದಲ್ಲಿ ವಾಸವಾಗಿರುವ ಗೋಪಿನಾಥ ರಾಯರ ಬಂಗಲೆ ಎದುರಿಗೆ ಹಚ್ಚ ಹಸುರಿನ ಬಯಲಿನ ಒಂದು ತುಣುಕು ಜಾಗದಲ್ಲಿ ನೃತ್ಯ ಕಾರ್ಯಕ್ರಮ ಏರ್ಪಾಡಾಗಿತ್ತು. ಇಬ್ಬರು ಯೌವನಸ್ಥರು ಸ್ತ್ರೀಯರ ಉಡುಗೆ ತೊಟ್ಟು ಮಾರವಾಡಿ ಸ್ತೀಯರಂತೆ ತಲೆಗೆ ಸೆರಗು ಹಾಕಿಕೊಂಡು, ಮುಖ ತೋರಿಸದೆ ಕುಣಿಯತೊಡಗಿದ್ದರು. ಹಿಮ್ಮೇಳಕ್ಕೆ ಡೋಲು ತಮಟೆಗಳಿದ್ದವು. ಮುಂಭಾಗದಲ್ಲಿ ಸ್ತ್ರೀ ವೇಷದ ನರ್ತಕರು ಲಾಸ್ಯವೆಸಗಿದರು. ಅವರ ಕಾಲಿನ ನಡಿಗೆಯಲ್ಲೂ ಕೈಗಳ ಚಲನೆಯಲ್ಲೂ ಜಾಣೆ ಚೆಲುವುಗಳೆರಡೂ ಇದ್ದವು. ಅವರ ಜೊತೆ ಮೂರು ನಾಲ್ಕು ಹುಡುಗರು ನಿತ್ಯದ ಉಡುಗೆಯಲ್ಲಿ ಕುಣಿದಾಡಿದರು. ಅದನ್ನು ನೋಡಲು ಪುರವಣಿಗರೂ ಸಹ ಅಲ್ಲಿ ಬಂದು ಸೇರಿದ್ದರು.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ – ಉತ್ತರಿಸಿ
1. ಜಯಪುರದ ಜನರಿಗೆ ಬಣ್ಣಗಳ ಬಗ್ಗೆ ಇರುವ ಮೋಹವನ್ನು ತಿಳಿಸಿ.
ಉತ್ತರ:-ಜಯಪುರದ ಜನ ಬಣ್ಣ ಹಾಕುವ ಕುಶಲಿಗರು, ಇಲ್ಲಿ ಬಣ್ಣದ ಮೋಹ ಇರುವ ಜನರು ಬಹಳ ಇದ್ದಾರೆ. ಜಯಪುರದ ಬಣ್ಣಗಾರರ ತವರೂರು ಎಂದೇ ಹೆಸರಾಗಿದೆ. ಇಲ್ಲಿನ ಜನರಿಗೆ ಅದರಲ್ಲಿಯೂ ಹೆಂಗಸರಿಗೆ ಬಣ್ಣಗಳೆಂದರೆ ಮತ್ತಷ್ಟು ಇಷ್ಟ, ಹೆಂಗಸರೂ ರಂಗುರಂಗಿನ ಲಂಗ, ಪಾಯಿಜಾಮಾ, ಸೀರೆ, ರವಿಕೆ, ಮೇಲುದೆ ತೊಡುವ ಅಭ್ಯಾಸದವರು. ಅದರಲ್ಲೂ ಕೆಂಪು ಕಿತ್ತಳೆ, ಹಳದಿ ಎಂದರೆ ಪ್ರಾಣ. ನಿತ್ಯವೂ ಹೋಳಿ ಹುಣ್ಣಿಮೆ ಮಾಡುವವರಂಥ ಬಣ್ಣದ ಚೆಲ್ಲಾಟ ಅವರ ಬಟ್ಟೆಗಳು ಕಾಣಬಹುದು. ಗಂಡಸರು ಕೂಡ ರಂಗುರಾಯರೇ ಅವರ ಪಂಚೆ, ಅಂಗಿಗಳಲ್ಲಿ ರಂಗು ಕಾಣಿಸದಿದ್ದರೂ ಮುಂಡಾಸಿನ ಮೂವತ್ತು ಮೊಳಗಳಲ್ಲಿ ಮುನ್ನೂರು ಬಣ್ಣಗಳನ್ನು ಮೆರೆಯಿಸುವುದುಂಟು.
2. ಅಂಬೇರ ಬೆಟ್ಟದ ಮೂರು ಅಂತಸ್ತಿನ ಅರಮನೆಯ ಒಳಾಂಗಣ ಚೆಲುವನ್ನು ತಿಳಿಸಿ
ಉತ್ತರ:-ಅಂಬೇರ ಬೆಟ್ಟದ ಮೇಲೆ ಕೋಟೆ ಇದ್ದು ಕೋಟೆಯ ಒಲಗೆ ಅರಮನೆ, ಅರಮನೆಗೆ ಸಂಬಂಧಿಸಿದ ಸಭಾಂಗಣ ದೇವಾಲಯ ಮೊದಲಾದವುಗಳನ್ನು ಅಲ್ಲಿ ಎರಡು ಮೂರು ಅಂತಸ್ತುಗಳಲ್ಲಿ ರಚಿಸಿದ್ದಾರೆ.
ಅಂಬೇರ ಬೆಟ್ಟದ ಮೂರನೆಯ ಅಂತಸ್ತಿಗೆ ಹೋದರೆ ರಾಜರ ಅಂತಃಪುರವನ್ನು ನೋಡಬಹುದು. ಇಲ್ಲಿನ ಕೆಲವು ಭಾಗಗಳಲ್ಲಿ ಚಂದ್ರಕಾಂತ ಶಿಲೆಯ ಸುಂದರ ಮಂಟಪಗಳಿವೆ. ಶಿಲೆಯನ್ನು ಕೆತ್ತಿ ಬಣ್ಣದ ಕಲ್ಲುಗಳಿಂದ ಕೊರೆದು ತುಂಬಿಸಿದ ಲತಾಪುಷ್ಪಗಳ ಚಿತ್ರಾವಳಿಗಳೂ ಇವೆ, ಇನ್ನೊಂದೆರಡು ಚಾವಡಿಗಳು ಕನ್ನಡಗಳ ಚೂರುಗಳನ್ನು ಸುಣ್ಣದ ಗಾರೆಯಲ್ಲಿ ಅಂಟಿಸಿ, ಚಿತ್ರ ವಿಚಿತ್ರ ಪ್ರತಿರೂಪಗಳನ್ನು ನಿರ್ಮಿಸಿ ಅಲಂಕರಿಸಿದಂತಹ ಕಂಬ, ಮುಚ್ಚಿಕೆಗಳುಳ್ಳ ರಚನೆ.ಕತ್ತಲಿನಲ್ಲಿ ದೀವಿಗೆ ಹೊತ್ತಿಸಿದಾಗ ಲಕೋಪಲಕ್ಷ ಈ ಗಾಜಿನ ತುಣುಕುಗಳು, ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತವೆ.ಅರಮನೆಯ ಮೊದಲನೆಯ ಮಟ್ಟದಲ್ಲಿ ಇನ್ನೊಂದು ಅಂತಃಪುರವಿದೆ. ಅಲ್ಲೂ ಹಾಲುಗಲ್ಲಿನ (ಅಮೃತಶಿಲೆಯ) ಚಾವಡಿ ಮತ್ತು ನೀರಿನ ಕಾರಂಜಿಗಳಿವೆ. ಚಿತ್ರ ಕೊರೆದು ಮಾಡಿದ ಹಾಲುಗಲ್ಲಿನ ನೀರ ಕಾಲುವೆಗಳಿವೆ. ಇವೆಲ್ಲ ರಜಪೂತ ಅರಸರುಗಳ ರಸಿಕ ಜೀವನದ ದ್ಯೋತಕಗಳು ಸಾಕ್ಷಿಗಳಾಗಿ ಉಳಿದೆವೆ.
3. ಜಂತ್ರ ಮಂತ್ರದ ವಿಶೇಷತೆಯನ್ನು ಪರಿಚಯ ಮಾಡಿಕೊಡಿ.
ಉತ್ತರ:-ಜಂತ್ರ – ಮಂತ್ರ ಹಳೆಯ ಕಾಲದ ಪರಿಶೀಲನಾಲಯ. 400-500 ವರ್ಷಗಳ ಪೂರ್ವದಲ್ಲಿ, ಖಗೋಳ ಶಾಸ್ತ್ರಜ್ಞರು ಗ್ರಹ, ಸೂರ್ಯ, ಚಂದ್ರ, ತಾರಾಮಂಡಲಗಳನ್ನು ಅಳೆದು, ಪರಿಶೀಲಿಸಿ ನೋಡುವ ಸಲುವಾಗಿ, ಇಲ್ಲಿ ವಿಚಿತ್ರವಾದ ಸಾಧನಗಳನ್ನು ನೆಟ್ಟಿದ್ದಾರೆ. ಇಂಥ ಹತ್ತೆಂಟು ವಿಧದ ಸಾಧನಗಳ ವಿಚಿತ್ರ ರಚನೆಗಳಿವೆ. ಗಳಿಗೆ ಅಳೆಯುವುದಕ್ಕೆ, ಪ್ರತಿಯೊಂದು ತಿಂಗಳಿನಲ್ಲೂ ಸೂರ್ಯ, ನಕ್ಷತ್ರ ಗತಿ ಪರಿಶೀಲಿ ಸುವುದಕ್ಕೆ ಏನೇನೋ ಏರ್ಪಾಡುಗಳಿವೆ. ಪ್ರತಿಯೊಂದು ಸಾಧನದ ಮೇಲೂ ಅವುಗಳ ಉಪಯೋಗ ಮತ್ತು ಕಾಲವನ್ನು ಅಳೆಯುವ ರೀತಿ ಮೊದಲಾದುವನ್ನು ನಮೂದಿ ಸಿದೆ. ದೂರದರ್ಶಿಯ ಸಹಾಯವಿಲ್ಲದೆ ಬರಿಗಣ್ಣಿನಿಂದಲೇ ಖಗೋಳದ ಗ್ರಹಗಳ ಗತಿಯನ್ನು ಅಳೆಯಲು ಮಾಡಿದ ಈ ಸಾಧನಗಳು, ಗಣಿತದಲ್ಲಿ ಸೂಕ್ಷ್ಮ ಪರಿಶೀಲನೆಗೂ ‘ಹಿರಿಯರು ಸಲ್ಲಿಸಿದ ಕಾಣಿಕೆಯಾಗಿವೆ.
ಈ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ:
1. “ಅಲ್ಲಿ ಮಧ್ಯಾಹ್ನ ವೇಳೆ ಸ್ನಾನಕ್ಕೆ ನೀನು ಕಾಯಿಸುವ ಅಗತ್ಯವಿಲ್ಲ”
ಉತ್ತರ:-ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು “ಡಾ. ಕೆ ಶಿವರಾಮಕಾರಂತ” ರವರ ‘ಬೆಡಗಿನ ತಾಣ ಜಯಪುರ’ ದಿಂದ ಆರಿಸಲಾಗಿದೆ. ಇದನ್ನು ಕಾರಂತರ ಅಬುವಿನಿಂದ ಬರಾಮಕ್ಕೆ” ಎಂಬ ಪ್ರವಾಸಕಥನದಿಂದ ಆರಿಸಲಾಗಿದೆ.
ಸಂದರ್ಭ: ಕಾರಂತರು ಒಮ್ಮೆ ಜಯಪುರಕ್ಕೆ ಪ್ರವಾಸ ಹೊರಟು ಅಲ್ಲಿ ಅವರ ಸ್ನೇಹಿತ ರೈ ರವರ ಮನೆಯಲ್ಲಿ ತಂಗಿದ್ದರು. ಅವರ ಮನೆ ಸುತ್ತಲೂ ಉಸುಬು ಹರಡಿದ್ದ ಮರುಭೂಮಿಯಲ್ಲಿತ್ತು. ಅದಕ್ಕೆ ಸ್ನಾನಕ್ಕೆ ಬೇಕದ ನೀರಿನ ಬಗ್ಗೆ ತಿಳಿಯಿತು.
ಸ್ವಾರಸ್ಯ: ಮರುಭೂಮಿಯ ಪ್ರದೇಶದಲ್ಲಿದ್ದ ಕಾರಣ ಅಲ್ಲಿ ನೀರು ಹಾಯಿಸುವ ಅಗತ್ಯವೇ ಇಲ್ಲ. ಅಲ್ಲಿರುವ ಉಸುಬಿನ ಕಾವಿನಿಂದ ನಲ್ಲಿಯ ನೀರು ಕಾದೇ ಬರುತ್ತಿತ್ತು ಎಂಬ ನೈಜ ಸನ್ನಿವೇಶವೊಂದನ್ನು ಲೇಖರು ಇಲ್ಲಿ ವ್ಯಕ್ತ ಪಡಿಸಿದ್ದಾರೆ.
2. “ಗಂಡಸರೂ ರಂಗುರಾಯರೇ”.
ಉತ್ತರ:-ಪ್ರಸ್ತಾವನೆ: ಪ್ರಸ್ತುತ ಈ ಗದ್ಯವನ್ನು ಡ. ಕೆ. ಶಿವರಾಮಕಾರಂತರು ರಚಿಸಿರುವ ‘ಬೆಡಗಿನ ತಾಣ ಜಯಪುರ’ ದಿಂದ ಆರಿಸಲಾಗಿದೆ. ಇದನ್ನು ಕಾರಂತರ ಅಬುವಿನಿಂದ ಬರಾಮಕ್ಕೆ” ಎಂಬ ಪ್ರವಾಸಕಥನದಿಂದ ಆರಿಸಲಾಗಿದೆ.
ಸಂದರ್ಭ: ಜಯಪುರ ಬೆಡಗಿನ ಊರು ಮಾತ್ರವಲ್ಲ ಬಣ್ಣಗಳ ತವರೂರು ಹೌದು. ಬಣ್ಣ ಹಾಕುವ ಕುಶಲಿಗರು ಆ ಊರಲ್ಲಿ ಬಹಳ ಮಂದಿ ಇದ್ದಾರೆ ಎನ್ನುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ: ಜಯಪುರದವರೆಗೆ ಬಣ್ಣಗಳೆಂದರೆ ಅದರಲ್ಲಿಯೂ ಕೆಂಪು ಕಿತ್ತಳೆ, ಹಳದಿ ಎಂದರೆ ಪ್ರಾಣ, ನೃತ್ಯವೂ ಹೋಳಿಹುಣ್ಣಿಮೆ ಮಾಡುವವರಂತೆ ಬಣ್ಣದ ಚೆಲ್ಲಾಟ ಅವರ ಬಟ್ಟೆಗಳಲ್ಲಿ, ಗಂಡಸರೂ ಕೂಡ ರಂಗು ರಾಯರೆ, ಅಂದರೆ ಗಂಡಸರು ಕೂಡ ರಂಗುರಂಗಿನ ಮುಂಡಾಸುಗಳನ್ನು ಧರಿಸುತ್ತಿದ್ದರು.
3. ಪ್ರಾಚೀನ ಗುಡಿ ಗೋಪುರಗಳು ಗೂಬೆಯ ಮನೆಗಳಾಗಿದ್ದವು.
ಉತ್ತರ:-ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು ‘ಕೆ.ಶಿವರಾಮ ಕಾರಂತರು ರಚಿಸಿರುವ ‘ಬೆಡಗಿನ ತಾಣ ಜಯಪುರ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ. ಇದನ್ನು “ಅಬುವಿನಿಂದ ಬರಾಮಕ್ಕೆ” ಎಂಬ ಪ್ರವಾಸ ಕಥನದಿಂದ ಆರಿಸಲಾಗಿದೆ.
ಸಂದರ್ಭ: ಅಂಬೇರವನ್ನು ಪರಿಚಯಿಸುವಾಗ ಲೇಖಕರು ಈ ವಾಕ್ಯವನ್ನು ಬರೆದಿದ್ದಾರೆ.
ಸ್ವಾರಸ್ಯ: ಅಂಬೇರ ಜಯಪುರದ ಪೂರ್ವಕಾಲದ ರಾಜಧಾನಿ, ಹಳೆಯ ಅರಮನೆಗಳೆಲ್ಲ ಅಲ್ಲಿವೆ, ಸಂಜೆ, ಮುಂಜಾನೆಗಳಲ್ಲಿ ಅಲ್ಲಿಯ ಗುಡಿ ಬೆಟ್ಟ ಹಾಗೂ ಕಣಿವೆಗಳು ಅಪೂರ್ವ ಮೊಹಕತೆಯನ್ನು ತಾಳುತ್ತದೆ. ಅಲ್ಲಿ ಜನವಸತಿ ಇರಲಿಲ್ಲ ಹಲವಾರು ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆಗಳಾಗಿದ್ದವು.
4. “ ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತವೆ”
ಉತ್ತರ:-ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು ಕೆ. ಶಿವರಾಮಕಾರಂತರ “ ಬೆಡಗಿನ ತಾಣ ಜಯಪುರದಿಂದ ಆಯ್ದುಕೊಳ್ಳಲಾಗಿದೆ. ಇದನ್ನು ಅಬುವಿನಿಂದ ಬರಾಮಕ್ಕೆ ಎಂಬ ಪವಾಸಕಥನದಿಂದ ಆರಿಸಲಾಗಿದೆ.
ಸಂದರ್ಭ: ಅಂಬೇರರ ಅರಮನೆಯ ಮೂರನೇ ಅಂತಸ್ತಿನ ಸೌಂದರ್ಯದ ಬಗ್ಗೆ ವಿವರಿಸುತ್ತಾ ಈ ವಾಕ್ಯವನ್ನು ಹೇಳಿದ್ದಾರೆ.
ಸ್ವಾರಸ್ಯ: ಅರಮನೆಯ ಆ ಚಾವಡಿಯ ಗೋಡೆಗಳಿಗೆ ಗಾಜಿನ ತುಣುಕುಗಳನ್ನು ಸೇರಿಸಿದ್ದಾರೆ ಕತ್ತಲಲ್ಲಿ ದೀವಿಗೆ ಹೊತ್ತಿಸಿದಾಗ ಆ ಗಾಜಿನ ತುಣುಕುಗಳು ಚಾವಡಿಗೆ ನಕ್ಷತ್ರದ ಲೋಕದ ಸೊಬಗನ್ನು ಕೊಡುತ್ತವೆ. ಎಂಬುದಾಗಿ ಕಾರಂತರು ವಿವರಿಸಿದ್ದಾರೆ.
ಉ) ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ:
1. ಜಯಪುರ ಬಣ್ಣಗಾರರ ತವರೂರು
2. ಚಿತ್ರ ಕೊರೆದು ಮಾಡಿದ ಹಾಲುಗಲ್ಲಿನ ನೀರಕಾಲುವೆಗಳು
3. ರಾಜರ ಅಂತಃಪುರದ ಕೆಲವು ಭಾಗಗಳಲ್ಲಿ ಚಂದ್ರಕಾಂತ ಶಿಲೆಯ ಸುಂದರ ಮಂಟಪಗಳಿವೆ.
4. ಹಿಮ್ಮೇಳಕ್ಕೆ ಡೋಲು ತಮಟೆಗಳಿದ್ದವು.
5. ಮಿತ್ರ ರೈಗಳ ಸತ್ಕಾರಕ್ಕೆ ವಂದನೆ ಸಲ್ಲಿಸಿದೆವು.
ಊ) ಹೊಂದಿಸಿ ಬರೆಯಿರಿ
1.ಅಂಬೇರ ಅ) ಸವರ್ಣದೀರ್ಘಸಂಧಿ
2. ಲಕೋಪಲಕ್ಷ ಆ) ತತ್ಸಮ
3.ಬಣ್ಣಬಣ್ಣ ಇ) ಪೂರ್ವದ ರಾಜದಾನಿ
4.ಜಂತ್ರ ಮಂತ್ರ ಈ) ದ್ವಿರುಕ್ತಿ
5. ಶೃಂಗಾರ ಉ) ಖಗೋಳ ವೀಕ್ಷಣಾಲಯ
ಉತ್ತರ:-
1.ಅಂಬೇರ ಇ) ಪೂರ್ವದ ರಾಜದಾನಿ
2. ಲಕೋಪಲಕ್ಷ ಅ) ಸವರ್ಣದೀರ್ಘಸಂಧಿ
3.ಬಣ್ಣಬಣ್ಣ ಈ) ದ್ವಿರುಕ್ತಿ
4.ಜಂತ್ರ ಮಂತ್ರ ಉ) ಖಗೋಳ ವೀಕ್ಷಣಾಲಯ
5. ಶೃಂಗಾರ ಆ) ತತ್ಸಮ
ಭಾಷಾ ಚಟುವಟಿಕೆ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ:-
1. ಕ್ರಿಯಾಪದ ಎಂದರೇನು?
ಉತ್ತರ:-ಕ್ರಿಯೆ ಪೂರ್ಣಗೊಂಡಿದೆ ಎಂಬ ಅರ್ಥವನ್ನು ಸೂಚಿಸಬಲ್ಲ ಪದವೇ ಕ್ರಿಯಾಪದ.
2. ಕ್ರಿಯಾಪ್ರಕೃತಿ ಎಂದರೇನು? ಉದಾಹರಣೆ ಕೊಡಿ.
ಉತ್ತರ:-ಕ್ರಿಯೆಯ ಮೂಲರೂಪವನ್ನು ಕ್ರಿಯಾಪ್ರಕೃತಿ ಎನ್ನುವರು, ಇದನ್ನು ‘ಧಾತು’ ಎಂದು ಕೂಡ ಕರೆಯುತ್ತಾರೆ.
ಉದಾಹಣೆ:- ರಾಜು ಊಟ ಮಾಡುತ್ತಿದ್ದಾನೆ, ಇಲ್ಲಿ ‘ಮಾಡುತ್ತಿದ್ದಾನೆ’ ಎಂಬುದು ಕ್ರಿಯಾಪದ ಮತ್ತು ಎಂಬುದು “ಮಾಡು” ಕ್ರಿಯಾಪ್ರಕೃತಿ,
3. ಸಕರ್ಮಕ ಧಾತುವನ್ನು ಉದಾಹರಣೆ ಸಹಿತ ವಿವರಿಸಿ.
ಉತ್ತರ:-ಕರ್ಮ ಪದಗಳನ್ನು ಅಪೇಕ್ಷಿಸುವ ಧಾತುಗಳೆಲ್ಲವೂ ಸಕರ್ಮಕ ಧಾತುಗಳು ಎನ್ನುವರು.
ಉದಾಹರಣೆ:-
1.ರಾಮನು ಗಿಡವನ್ನು ನೆಟ್ಟನು.
2.ಶಿಲ್ಪಿಗಳು ಗುಡಿಯನ್ನು ಕಟ್ಟಿದರು.
3.ವಿದ್ಯಾರ್ಥಿಗಳು ಪಾಠವನ್ನು ಓದಿದರು.
4) ಅಕರ್ಮಕ ಧಾತುಗಳಿಗೆ ಐದು ನಿದರ್ಶನ ಕೊಡಿ.
ಉತ್ತರ:-
1.ಕೂಸು ಮಲಗಿತು.
2.ಅವನು ಬದುಕಿದನು.
3. ಆಕಾಶ ಹೊಳೆಯುತ್ತಿದೆ.
4. ಅಪ್ಪ ಇದ್ದಾರೆ
5. ಅಜ್ಜ ಇದ್ದಾರೆ.
ಆ) ಕೊಟ್ಟಿರುವ ವಾಕ್ಯಗಳಲ್ಲಿ ಸಕರ್ಮಕ ಮತ್ತು ಅಕರ್ಮಕ ಧಾತುಗಳನ್ನು ಗುರುತಿಸಿ ಬರೆಯಿರಿ:-
ಉತ್ತರ:-
1. ವಿದ್ಯಾರ್ಥಿನಿಯರು ಆಟವನ್ನು ಆಡಿದರು.
“ಆಡಿದರು” ಸಕರ್ಮಕ ಧಾತು
2. ಗಾಳಿಯ ಬೀಸುತ್ತಿದೆ,
“ಬೀಸುತ್ತಿದೆ” ಅಕರ್ಮಕ ಧಾತು
3. ಹಕ್ಕಿಗಳು ಚಿಲಿಪಿಲಿ ಗುಟ್ಟಿದವು.
“ಗುಟ್ಟಿದವು” ಸಕರ್ಮಕ ಧಾತು
4. ರೈತನು ಹೊಲವನ್ನು ಉಳುತ್ತಾನೆ
“ಉಳುತ್ತಾನೆ” ಸಕರ್ಮಕ ಧಾತು
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ:-
1. ಕರ್ತರಿ ಪ್ರಯೋಗ ವಾಕ್ಯದ ವಿಶೇಷತೆಯನ್ನು ತಿಳಿಸಿ.
ಉತ್ತರ:-
ಕರ್ತರಿ ಪ್ರಯೋಗದ ವಾಕ್ಯಗಳಲ್ಲಿ ಲಿಂಗ ಮತ್ತು ವಚನವಾಚಕಗಳು ಸೇರಿ ಪೂರ್ಣ ವಾಕ್ಯ ವಾಗುತ್ತವೆ.
ಉದಾಹರಣೆ:-
1.ಅಣ್ಣ ಅನ್ನವನ್ನು ಉಂಡನು .
2.ಕೃಷ್ಣ ಕಾಳಿಂಗವನ್ನು ಮರ್ದಿಸಿದನು.
2) ವಿದ್ಯರ್ಥಕ ಕ್ರಿಯಾಪದ ಎಂದರೇನು? ಎರಡು ಉದಾಹರಣೆ ನೀಡಿ.
ಉತ್ತರ:-
ಆಶೀರ್ವಾದ, ಅಪ್ಪಣೆ, ಆಜ್ಞೆ , ಹಾರೈಕೆ, ಸಮ್ಮತಿ ಇತ್ಯಾದಿ ವಿಧಿಗಳನ್ನು ಹೊಂದಿರುವ ಕ್ರಿಯಾಪದಗಳೇ ವಿಧ್ಯರ್ಥಕ ಕ್ರಿಯಾಪದಗಳು.
ಉದಾಹರಣೆ:-
1.ಕೃಷ್ಣನು ಹಣ್ಣನ್ನು ತಿನ್ನನು.
2.ಕಮಲೆಯು ಆಟಕ್ಕೆ ಬಾರಳು.
3. ಸಂಭಾವನಾರ್ಥಕ ಕ್ರಿಯಾಪದವನ್ನು ಸೂಕ್ತ ಸಹಿತ ವಿವರಿಸಿ.
ಕ್ರಿಯೆ ನಡೆಯುವುದು ಸಂಶಯ ಎಂಬ ಅರ್ಥವನ್ನು ಸೂಚಿಸುವ ಕ್ರಿಯಾಪದಗಳನ್ನು ಸಂಭಾವನಾರ್ಥಕ ಕ್ರಿಯಾಪದಗಳು
ಉದಾಹರಣೆ
1. ಅವರು ನಾಳೆ ಬಂದಾರು.
2. ಚೆಂಡು ಮೇಲಕ್ಕೆ ಹೋದೀತು.
ಈ) ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ:-
1. “ದೇವರು ಎಲ್ಲರಿಗೂ ಒಳ್ಳೆಯದನ್ನೇ ಉಂಟುಮಾಡಲಿ” ಈ ವಾಕ್ಯದಲ್ಲಿರುವ ಕ್ರಿಯಾಪದ
ಅ) ದೇವರು
ಆ) ಎಲ್ಲರಿಗೂ
ಇ) ಒಳ್ಳೆಯದನ್ನೆ
ಈ) ಉಂಟುಮಾಡಲಿ,
ಉತ್ತರ :-(ಈ) ಉಂಟುಮಾಡಲಿ
2. ಈ ಪದವು ನಿಷ್ಠೆಧಾರ್ಥಕ ಕ್ರಿಯಾಪದಕ್ಕೆ ಉದಾಹರಣೆ:-
ಅ) ತಿನ್ನನು
ಆ) ತಿನ್ನಲಿ
ಇ) ತಿಂದಾನು
ಈ) ತಿನ್ನುತ್ತಾನೆ,
ಉತ್ತರ:- (ಅ) ತಿನ್ನನು
3) ಇದು ಈ ಗುಂಪಿಗೆ ಸೇರದ ಪದವಾಗಿದೆ
ಅ) ಉತ್ಸಾಹ
ಆ) ಉಪಮಾ
ಇ) ಮಂದಾನಿಲ
ಈ) ಲಲಿತ
ಉತ್ತರ:- (ಆ) ಉಪಮಾ
4. “ಎಳಸಿರ್ಪ” ಈ ಪದದ ಅರ್ಥ
ಅ) ಎಳೆಯದಾಗಿರುವ
ಆ) ಮಿತಿಯಿಲ್ಲದ
ಇ) ರುಚಿಯಾದ
ಈ) ಸುತ್ತುವರಿದಿರುವ
ಉತ್ತರ:- (ಈ) ಸುತ್ತುವರಿದಿರುವ
ಉ) ಕೊಟ್ಟಿರುವ ಪದಗಳಲ್ಲಿ ಅನುಸ್ವಾರ – ವಿಸರ್ಗ ಸಹಿತ ಅಕ್ಷರಗಳನ್ನು ಗುರುತಿಸಿ ಬರೆಯಿರಿ:-
1. ಸ್ವತಃ = ವಿಸರ್ಗ
2. ಸುಂದರ = ಅನುಸ್ವಾರ
3. ರಂಗುರಂಗಿನ = ಅನುಸ್ವಾರ
4. ಕೆಂಪು = ಅನುಸ್ವಾರ
5. ದುಃಖ = ವಿಸರ್ಗ
6. ಹಿಂದೊಮ್ಮೆ = ಅನುಸ್ವಾರ
7. ಗಂಡಸರು = ಅನುಸ್ವಾರ
8. ಅಂತಃಕರಣ = ಅನುಸ್ವಾರ (ಅಂತ) ಅಂತಃಕರಣ-ವಿಸರ್ಗ
9. ಪಂಚೆ = ಅನುಸ್ವಾರ
10. ಅಂಗಿ = ಅನುಸ್ವಾರ
11. ಮುಂಡಾಸು = ಅನುಸ್ವಾರ
12. ಅಂಬೇರ = ಅನುಸ್ವಾರ
13. ಸಭಾಂಗಣ = ಅನುಸ್ವಾರ
14. ಜಂತ್ರ ಮಂತ್ರ = ಅನುಸ್ವಾರ
15 ಅಂತಸ್ತು = ಅನುಸ್ವಾರ
16. ಅಂತಃಪುರ = ಅಂತ ಅನುಸಾರ –ವಿಸರ್ಗ
ಊ) ಕೊಟ್ಟಿರುವ ಪದಗಳಲ್ಲಿ ಅನುನಾಸಿಕ ಅಕ್ಷರಗಳನ್ನು ಗುರುತಿಸಿ ಬರೆಯಿರಿ:-
ಉತ್ತರ:-
1. ನಗರ ನ
2. ಮಧ್ಯ- ಮ
3. ಪರಿಣಾಮ-ಮ,ಣ
4. ಬಣ್ಣ-ಣ
5.ನಿತ್ಯ-ನ
6. ಜನ – ನ
7. ಮನೆ -ಮ,ನ
8. ಕಣಿವೆ – ಣಿ –
9. ಮಂದಿರ – ಮ –
10. ವಿಜ್ಞಾನ – ನ
ಋ) ಕೊಟ್ಟಿರುವ ವಿಷಯಗಳನ್ನು ಕುರಿತು ಒಂದು ಪುಟಕ್ಕೆ ಮೀರದಂತೆ ಪ್ರಬಂಧ ಬರೆಯಿರಿ:
1. ಜನಸಂಖ್ಯೆ
ಇಂದು ಜಾಗತಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಜನಸಂಖ್ಯೆಯ ಸಮಸ್ಯೆಯು ನಿರ್ಣಾಯಕವಾಗಿದೆ. ಮಾನವ ಜನಸಂಖ್ಯೆಯ ಬೆಳವಣಿಗೆಯು ಕಳೆದ ಶತಮಾನದಲ್ಲಿ ಗಗನಕ್ಕೇರಿದೆ, ಇದು ಅವಕಾಶಗಳು ಕಡಿಮೆ ಮಾಡಿ ಮತ್ತು ಸವಾಲುಗಳನ್ನು ಹೆಚ್ಚಿಸುತ್ತದೆ. ಈಗ ಜಾಗತಿಕ ಜನಸಂಖ್ಯೆಯು 7 ಬಿಲಿಯನ್ ಗಿಂತಲೂ ಹೆಚ್ಚು ಜನರನ್ನು ಹೊಂದಿದ್ದು ,ಇದು ವೇಗವಾಗಿ ಹೆಚ್ಚುತ್ತಿದೆ. ಈ ಬೆಳವಣಿಗೆಯು ಆಹಾರ ಭದ್ರತೆ, ಆರೋಗ್ಯ ರಕ್ಷಣೆ, ವಸತಿ ಮತ್ತು ಪರಿಸರಕ್ಕೆ ಗಮನಾರ್ಹ ಸಮಸ್ಯೆಗಳನ್ನು ತಂದೊಡ್ಡಿದೆ.
ನೀರು, ಕೃಷಿಯೋಗ್ಯ ಭೂಮಿ ಮತ್ತು ಶಕ್ತಿಯಂತಹ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಒತ್ತಡವು ಒಂದು ಪ್ರಮುಖ ಕಾಳಜಿಯಾಗಿದೆ. ಹೆಚ್ಚು ಜನರು ಈ ಗ್ರಹದಲ್ಲಿ ವಾಸಿಸುತ್ತಿದ್ದಂತೆ, ಈ ಸಂಪನ್ಮೂಲಗಳ ಬೇಡಿಕೆಯು ತೀವ್ರಗೊಳ್ಳುತ್ತದೆ, ಇದು ಕೊರತೆ ಮತ್ತು ಸ್ಪರ್ಧೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದಲ್ಲದೆ, ಜನಸಂಖ್ಯೆಯು ನಗರಗಳಲ್ಲಿ ಕೇಂದ್ರೀಕೃತವಾಗಿರುವುದರಿಂದ ನಗರೀಕರಣವು ವೇಗಗೊಂಡಿದೆ, ಮೂಲಸೌಕರ್ಯ ಮತ್ತು ಸಾಮಾಜಿಕ ಸವಾಲುಗಳನ್ನು ಇದು ಉಂಟು ಮಾಡುತ್ತದೆ.
ಸಾಮಾಜಿಕ ಮಟ್ಟದಲ್ಲಿ, ಜನಸಂಖ್ಯೆಯು ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಸ್ಥಿರತೆಯ ಮೇಲೆ ಪ್ರಭಾವ ಬೀರುತ್ತದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತ್ವರಿತ ಜನಸಂಖ್ಯೆಯ ಬೆಳವಣಿಗೆಯು ಮೂಲಸೌಕರ್ಯವನ್ನು ಬುಡಮೇಲು ಮಾಡುತ್ತದೆ. ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ಪ್ರವೇಶವನ್ನು ಮಿತಿಗೊಳಿಸಬಹುದು. ಇದಕ್ಕೆ ವಿರುದ್ಧವಾಗಿ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿನ ವಯಸ್ಸಾದ ಜನಸಂಖ್ಯೆಯು ಆರೋಗ್ಯ ವೆಚ್ಚಗಳು ಮತ್ತು ಪಿಂಚಣಿ ವ್ಯವಸ್ಥೆಗಳಿಗೆ ಸಂಬಂಧಿಸಿದ ಆರ್ಥಿಕ ಸವಾಲುಗಳನ್ನು ಪ್ರಸ್ತುತಪಡಿಸುತ್ತದೆ.
ಮಾನವ ಜನಸಂಖ್ಯೆಯ ಬೆಳವಣಿಗೆಯ ಪರಿಸರ ಪ್ರಭಾವವು ಆಳವಾದದ್ದು, ಜೀವವೈವಿಧ್ಯತೆ, ಹವಾಮಾನ ಬದಲಾವಣೆ ಮತ್ತು ಪರಿಸರ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ.
2. ನಿರುದ್ಯೋಗ
ನಿರುದ್ಯೋಗವು ಜಾಗತಿಕವಾಗಿ ಸಮಾಜಗಳ ಮೇಲೆ ಪರಿಣಾಮ ಬೀರುವ ನಿರಂತರ ಮತ್ತು ಸಂಕೀರ್ಣ ಸಮಸ್ಯೆಯಾಗಿ ಉಳಿದಿದೆ. ನಿರುದ್ಯೋಗವು ಸಕ್ರಿಯವಾಗಿ ಕೆಲಸ ಹುಡುಕುತ್ತಿರುವ ಆದರೆ ಉದ್ಯೋಗಾವಕಾಶಗಳನ್ನು ಹುಡುಕಲು ಸಾಧ್ಯವಾಗದ ವ್ಯಕ್ತಿಗಳನ್ನು ಸೂಚಿಸುತ್ತದೆ. ಈ ವಿದ್ಯಮಾನವು ವ್ಯಾಪಕವಾದ ಸಾಮಾಜಿಕ, ಆರ್ಥಿಕ ಮತ್ತು ವೈಯಕ್ತಿಕ ಪರಿಣಾಮಗಳನ್ನು ಬೀರುತ್ತದೆ.
ಮೊದಲನೆಯದಾಗಿ, ನಿರುದ್ಯೋಗವು ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಆರ್ಥಿಕ ಅಭದ್ರತೆಗೆ ಕಾರಣವಾಗುತ್ತದೆ, ಆಹಾರ, ವಸತಿ ಮತ್ತು ಆರೋಗ್ಯದಂತಹ ಮೂಲಭೂತ ಅಗತ್ಯಗಳನ್ನು ಪೂರೈಸುವ ಅವರ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಸ್ವಾಭಿಮಾನವನ್ನು ದುರ್ಬಲಗೊಳಿಸುತ್ತದೆ ಮತ್ತು ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಆರ್ಥಿಕ ದೃಷ್ಟಿಕೋನದಿಂದ, ಹೆಚ್ಚಿನ ಮಟ್ಟದ ನಿರುದ್ಯೋಗವು ಕಾರ್ಮಿಕ ಮಾರುಕಟ್ಟೆಯಲ್ಲಿ ಅಸಮರ್ಥತೆಯನ್ನು ಸೂಚಿಸುತ್ತದೆ ಮತ್ತು ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗಬಹುದು.
ನಿರುದ್ಯೋಗವು ಕಾರ್ಮಿಕರು ಹೊಂದಿರುವ ಕೌಶಲ್ಯಗಳು ಮತ್ತು ಉದ್ಯೋಗದಾತರಿಂದ ಬೇಡಿಕೆಯಿರುವ ಕೌಶಲ್ಯಗಳ ನಡುವೆ ಹೊಂದಾಣಿಕೆಯಿಲ್ಲದಿದ್ದಾಗ ಸಂಭವಿಸುತ್ತದೆ. ಇದು ತಾಂತ್ರಿಕ ಪ್ರಗತಿಗಳು ಅಥವಾ ಕೈಗಾರಿಕೆಗಳಲ್ಲಿನ ಬದಲಾವಣೆಗಳಿಂದ ಉಲ್ಬಣಗೊಳ್ಳಬಹುದು,
ಮತ್ತೊಂದೆಡೆ, ನಿರುದ್ಯೋಗವು ವ್ಯಾಪಾರ ಚಕ್ರದಲ್ಲಿನ ಏರಿಳಿತಗಳೊಂದಿಗೆ ಸಂಬಂಧ ಹೊಂದಿದೆ. ಆರ್ಥಿಕ ಕುಸಿತದ ಸಮಯದಲ್ಲಿ, ವ್ಯಾಪಾರಗಳು ವೆಚ್ಚವನ್ನು ಕಡಿಮೆ ಮಾಡಲು ಕೆಲಸಗಾರರನ್ನು ನೇಮಿಸಿಕೊಳ್ಳುವುದನ್ನು ಕಡಿತಗೊಳಿಸಬಹುದು, ಇದು ನಿರುದ್ಯೋಗ ದರಗಳಲ್ಲಿ ತಾತ್ಕಾಲಿಕ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಯುವಕರ ನಿರುದ್ಯೋಗವು ಬಹಳ ಗಂಭೀರ ಸಮಸ್ಯೆಯಾಗಿದೆ, ಏಕೆಂದರೆ ಇದು ವ್ಯಕ್ತಿಗಳ ವೃತ್ತಿಜೀವನದ ಪಥಗಳು ಮತ್ತು ಆರ್ಥಿಕ ನಿರೀಕ್ಷೆಗಳ ಮೇಲೆ ದೀರ್ಘಾವಧಿಯ ಪರಿಣಾಮಗಳನ್ನು ಉಂಟುಮಾಡಬಹುದು. ಹೆಚ್ಚಿನ ಯುವ ನಿರುದ್ಯೋಗ ದರಗಳು ಕೆಲವು ಪ್ರದೇಶಗಳಲ್ಲಿ ಸಾಮಾಜಿಕ ಅಶಾಂತಿ ಮತ್ತು ರಾಜಕೀಯ ಅಸ್ಥಿರತೆಗೆ ಕಾರಣವಾಗಬಹುದು.
ಉದ್ಯೋಗ ತರಬೇತಿ ಕಾರ್ಯಕ್ರಮಗಳು, ಶಿಕ್ಷಣ ಸುಧಾರಣೆ ಮತ್ತು ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆಯಂತಹ ಉಪಕ್ರಮಗಳ ಮೂಲಕ ನಿರುದ್ಯೋಗವನ್ನು ಪರಿಹರಿಸುವಲ್ಲಿ ಸರ್ಕಾರದ ನೀತಿಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ನಿರುದ್ಯೋಗ ಪ್ರಯೋಜನಗಳನ್ನು ಒಳಗೊಂಡಂತೆ ಸಾಮಾಜಿಕ ಸುರಕ್ಷತಾ ಜಾಲಗಳು ಕೆಲಸವಿಲ್ಲದವರಿಗೆ ತಾತ್ಕಾಲಿಕ ಹಣಕಾಸಿನ ನೆರವು ನೀಡುತ್ತವೆ.
ನಿರುದ್ಯೋಗವನ್ನು ಪರಿಹರಿಸಲು ಅನುಕೂಲಕರವಾದ ವ್ಯಾಪಾರ ವಾತಾವರಣವನ್ನು ಬೆಳೆಸುವುದು, ಉದ್ಯಮಶೀಲತೆಯನ್ನು ಉತ್ತೇಜಿಸುವುದು ಮತ್ತು ಆರ್ಥಿಕ ಬೆಳವಣಿಗೆಯನ್ನು ಖಾತ್ರಿಪಡಿಸುವುದನ್ನು ಒಳಗೊಂಡಿರುವ ಬಹುಮುಖಿ ವಿಧಾನದ ಅಗತ್ಯವಿದೆ. ಅವಕಾಶಗಳನ್ನು ಸೃಷ್ಟಿಸಲು ಮತ್ತು ನಿರುದ್ಯೋಗ ದರಗಳನ್ನು ಸುಸ್ಥಿರವಾಗಿ ಕಡಿಮೆ ಮಾಡಲು ಸರ್ಕಾರಗಳು, ವ್ಯವಹಾರಗಳು ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಸಹಯೋಗ ಅತ್ಯಗತ್ಯ.
ಕೊನೆಯಲ್ಲಿ, ನಿರುದ್ಯೋಗವು ಒಂದು ಸಂಕೀರ್ಣ ಸಮಸ್ಯೆಯಾಗಿದ್ದು, ಒಟ್ಟಾರೆಯಾಗಿ ವ್ಯಕ್ತಿಗಳು, ಆರ್ಥಿಕತೆಗಳು ಮತ್ತು ಸಮಾಜಗಳಿಗೆ ದೂರಗಾಮಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದರ ಮೂಲ ಕಾರಣಗಳನ್ನು ನಿಭಾಯಿಸಲು ಮತ್ತು ಎಲ್ಲರಿಗೂ ಅರ್ಥಪೂರ್ಣ ಉದ್ಯೋಗದ ಮಾರ್ಗಗಳನ್ನು ಒದಗಿಸಲು ಪರಿಣಾಮಕಾರಿ ನೀತಿಗಳು ಮತ್ತು ಕಾರ್ಯತಂತ್ರಗಳು ಅಗತ್ಯವಿದೆ.
ಎ) ನೀವು ಭೇಟಿ ಮಾಡಿದ ಸ್ಥಳಗಳ ಬಗೆಗೆ ಪ್ರವಾಸ ಲೇಖನವನ್ನು ರಚಿಸಿ.
ನಮ್ಮ ಶಾಲೆಯಿಂದ ನಮಗೆ ಒಂದು ದಿನದ ಶೈಕ್ಷಣಿಕ ಪ್ರವಾಸವನ್ನು ಹೊರಟೆವು.ನಾವು ಬೆಂಗಳೂರಿನಿಂದ ಹೊರಗೆ ಹೊರಟಾಗ ಹತ್ತು ಗಂಟೆಯ ಆಗಿತ್ತು ಮತ್ತು ನಮಗೆಲ್ಲಾ ಹಸಿವಾಗಿತ್ತು.ಆದ್ದರಿಂದ ರಾಮನಗರದ ಬಳಿಯಲ್ಲಿ ‘ಜಾನಪದಲೋಕ’ ಎಂಬ ಸ್ಥಳವಿತ್ತು, ನಾವು ಹೊಟ್ಟೆ ತುಂಬ ಉಪ್ಪಿಟ್ಟು ಕೇಸರಿ ಬಾತ್ ತಿಂದೆವು. ನಂತರ ಜಾನಪದಲೋಕದ ವೀಕ್ಷಣೆಗೆ ಹೋದೆವು, ಅಲ್ಲಿ ನಾವು ಎಂದೂ ನೋಡಿರದ ಬಗೆಬಗೆಯ ಕಲಾಕೃತಿಗಳಿದ್ದವು. ಹಳ್ಳಿಜನರ ಉಡುಗೆ ತೊಡುಗೆ, ರೈತರು ಕೃಷಿಗೆ ಉಪಯೋಗಿಸಬಹುದಾದ ಎಲ್ಲಾ ರೀತಿಯ ಪರಿಕರಗಳು ಅಲ್ಲಿದ್ದವು. ನಮ್ಮ ಶಿಕ್ಷಕರು ಅದರ ಹೆಸರು ಹೇಳುತ್ತಾ ಅದರ ಉಪಯೋಗಗಳನ್ನು ತಿಳಿಸಿದರು. ಅಲ್ಲಿ ಸಾಕಷ್ಟು ಗುಡಿಸಲು, ಮನೆಗಳು, ಮೊದಲಾದ ಮಾದರಿಗಳು, ದೊಡ್ಡ ದೊಡ್ಡ ಬಿದಿರು ಮೆಳೆಗಳನ್ನು ಕಂಡು ಆಶ್ಚರ್ಯಗೊಂಡೆವು. ನಮ್ಮ ಶಿಕ್ಷಕರು ಬಿದಿರಿನಿಂದ ನಮಗಾಗುವ ಉಪಯೋಗಗಳನ್ನು ತಿಳಿಸಿದರು.
ನಾವು ಅಲ್ಲಿಂದ ಶ್ರೀರಂಗಪಟ್ಟಣಕ್ಕೆ ಬಂದೆವು. ಶ್ರೀರಂಗನಾಥ ದರ್ಶನ ಮಾಡಿಕೊಂಡು, ಕಾವೇರಿ ತಾಯಿಗೆ ಕೈಮುಗಿದು ಬರುವಾಗ ಟಿಪ್ಪುಸುಲ್ತಾನ, ಇಂಗ್ಲೀಷ್ರೊಡನೆ ಹೋರಾಡುತ್ತಾ ಮಡಿದ ಸ್ಥಳವನ್ನು ಕಂಡು ಭಾವುಕರಾದೆವು. ನಂತರ ಇಂಗ್ಲೀಷರ ಕಾಲದಲ್ಲಿ ಧ್ವಜಸ್ತಂಭವನ್ನು, ಜಮ್ಮು ಮಸೀದಿಯನ್ನು ಕಂಡು ನಂತರ ಪಾಳುಬಿದ್ದ ಕೋಟೆ, ಕಂದಕಗಳನ್ನು ನೋಡಿದೆವು. ನಂತರ ಮಂಡ್ಯದ ಹಳ್ಳಿಯ ಸರಳ ಜೀವನವನ್ನು ನೋಡಲು ಹೋದೆವು, ಇಂದಿನ ಕೃಷಿಯ ವಿದ್ಯೆ ತಿಳಿಯಲು ಹೋದೆವು. ನಂತರ ಅಲ್ಲಿಂದ ಮನೆ ಕಡೆ ಪ್ರಯಾಣ ಬೆಳಸಿದೆವು.