ಆರ್ಥಿಕ ರಚನೆ
ಅಭ್ಯಾಸ
|.ಖಾಲಿ ಬಿಟ್ಟ ಸ್ಥಳಗಳನ್ನು ತುಂಬಿರಿ.
1.ರಚನಾತ್ಮಕ ಬದಲಾವಣೆ ಆರ್ಥಿಕ ಚಟುವಟಿಕೆಗೆ ಸಂಬಂಧವಾಗಿದೆ.
2. ಪುರಾತನ ಆರ್ಥಿಕತೆಯಲ್ಲಿ ಕೃಷಿ ಪ್ರಧಾನವಾಗಿತ್ತು.
3. ಸರಳ ಆರ್ಥಿಕತೆಯಲ್ಲಿ ಎರಡು ವಲಯಗಳು ಇರುತ್ತವೆ.
4. ಸ್ಥಿರಾತ್ಮಕ ಅರ್ಥಶಾಸ್ತ್ರ ಗ್ರೀಕ್ನ ಸ್ಟಾಟಿಕೆ ಪದದಿಂದ ಬಂದಿದೆ.
5. ಕೈಗಾರಿಕಾ ಕ್ರಾಂತಿ ಮೊದಲಿಗೆ ಬ್ರಿಟನ್ ದೇಶದಲ್ಲಿ ನಡೆಯಿತು.
||. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರ ಬರೆಯಿರಿ:
6. ರಚನಾತ್ಮಕ ಬದಲಾವಣೆ ಎಂದರೇನು?
ಉತ್ತರ:-ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯದ ಚಟುವಟಿಕೆಗಳು, ಅರ್ಥವ್ಯವಸ್ಥೆಯಲ್ಲಿನ ಈ ಮೂರೂ ವಲಯಗಳಲ್ಲಿನ ಉತ್ಪಾದನೆ, ಉದ್ಯೋಗದ ಸ್ವರೂಪ, ಆದಾಯದ ಮಟ್ಟ, ತಂತ್ರಜ್ಞಾನದ ಬಳಕೆ ಮತ್ತು ಜೀವನವಿಧಾನಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಆರ್ಥಿಕ ರಚನೆ ಎನ್ನಲಾಗುತ್ತದೆ. ಒಟ್ಟಿನಲ್ಲಿ ಕೃಷಿ, ಕೈಗಾರಿಕೆ ಮತ್ತು ಸೇವಾವಲಯದಲ್ಲಿನ ಬದಲಾವಣೆಯೇ ರಚನಾತ್ಮಕ ಬದಲಾವಣೆ.
7. ಪುರಾತನ ಅರ್ಥ ವ್ಯವಸ್ಥೆಯ ಲಕ್ಷಣಗಳನ್ನು ತಿಳಿಸಿ.
ಉತ್ತರ:-ಪುರಾತನ ಭಾರತದ ಅರ್ಥವ್ಯವಸ್ಥೆಯು, ಜಗತ್ತಿನ ಇತರೆ ಪ್ರಾಚೀನ ಅರ್ಥವ್ಯವಸ್ಥೆಗಳಂತೆ ಕೃಷಿ ಪ್ರಧಾನ ಅರ್ಥವ್ಯವಸ್ಥೆ ಆಗಿತ್ತು. ದೇಶದ ಬಹುತೇಕ ಜನ ಕೃಷಿಯನ್ನು ಅವಲಂಬಿಸಿದ್ದರು. ಆಗ ಕೃಷಿಯು ಜೀವನಾಧಾರ ಬೇಸಾಯವಾಗಿತ್ತು. ಜೀವನಾಧಾರ ಕೃಷಿಯಲ್ಲಿ ತಮಗೆ ಅಗತ್ಯಕ್ಕೆ ತಕ್ಕ ಆಹಾರವನ್ನಷ್ಟೆ ಬೆಳೆಯುತ್ತಿದ್ದರು. ಜನರ ಬಯಕೆಗಳು ಕಡಿಮೆಯಿದ್ದು, ಅವರ ಬದುಕು ಸರಳವಾಗಿತ್ತು. ಹಾಗಾಗಿ ಶ್ರಮವಿಭಜನೆ ಅಷ್ಟಾಗಿ ಬಳಕೆಯಿರಲಿಲ್ಲ, ವಸ್ತುವಿನಿಮಯ ಪದ್ಧತಿ ಬಳಕೆಯಲ್ಲಿತ್ತು.
8. ಬಂಡವಾಳವರ್ಗ ಹೇಗೆ ಉದಯವಾಯಿತು?
ಉತ್ತರ:-17 ಮತ್ತು 18ನೇ ಶತಮಾನದಲ್ಲಿ ಬ್ರಿಟನ್ನಿನಲ್ಲಿ ಸಂಭವಿಸಿದ ಕೈಗಾರಿಕಾ ಕ್ರಾಂತಿಯು ಕ್ರಮೇಣ ಬೇರೆ ಬೇರೆ ಭಾಗಗಳಿಗೆ ವ್ಯಾಪಿಸಿತು. ಕೈಗಾರಿಕಾ ಕ್ರಾಂತಿಯು ಸಮಾಜದಲ್ಲಿ ಬಂಡವಾಳವರ್ಗ ಎಂಬ ಹೊಸವರ್ಗದ ಉದಯಕ್ಕೆ ದಾರಿ ಮಾಡಿಕೊಟ್ಟಿತು.
9. ಆದಾಯದ ಮೂಲಗಳು ಯಾವುವು?
ಉತ್ತರ:-ಸರಳ ಅರ್ಥವ್ಯವಸ್ಥೆಯಲ್ಲಿ ಆದಾಯದ ಮೂಲವು ಎರಡು ಮೂಲಗಳಿಂದ ಲಭ್ಯವಾಗುತ್ತವೆ. ಅವುಗಳೆಂದರೆ 1] ಗೃಹ ಘಟಕ 2] ಉದ್ಯಮ ಘಟಕ ಎರಡೂ ಪರಸ್ಪರ ವಿನಿಮಯದ ಮೂಲಕ ಆದಾಯವನ್ನು ಸೃಷ್ಟಿಸುತ್ತವೆ.
ಗೃಹ ಘಟಕಗಳು ಉತ್ಪಾದನಾಂಗಗಳಾದ ಭೂಮಿ, ಶ್ರಮ, ಬಂಡವಾಳ ಮತ್ತು ಸಂಘಟನೆಗಳ ಮಾಲೀಕತ್ವ ಹೊಂದಿದ್ದು, ಅವುಗಳನ್ನು ಉದ್ಯಮ ಘಟಕಗಳಿಗೆ ಪೂರೈಸುತ್ತವೆ.
ಉದ್ಯಮ ಘಟಕಗಳು ಇದಕ್ಕೆ ಪ್ರತಿಫಲವಾಗಿ ಭೂಮಿಗೆ ಗೇಣಿ, ಶ್ರಮಕ್ಕೆ ಕೂಲಿ, ಬಂಡವಾಳಕ್ಕೆ ಬಡ್ಡಿ ಹಾಗು ಸಂಘಟನೆಗೆ ಲಾಭವನ್ನು ನೀಡುತ್ತವೆ. ಗೇಣಿ, ಕೂಲಿ, ಬಡ್ಡಿ, ಲಾಭ ಗೃಹಘಟಕಗಳ ಆದಾಯವಾಗಿದೆ.
ಉದ್ಯಮ ಘಟಕಗಳು ಉತ್ಪಾದನಾಂಗಗಳನ್ನು ಬಳಸಿ ಕೊಂಡು ಸರಕು ಸೇವೆಗಳನ್ನು ಉತ್ಪಾದಿಸಿ ಗೃಹ ಘಟಕಗಳಿಗೆ ಮಾರಾಟ ಮಾಡುತ್ತವೆ. ಇವುಗಳಿಗೆ ಗೃಹಘಟಕಗಳು ಸಂದಾಯ ಮಾಡುವ ಹಣವು ಉದ್ಯಮ ಘಟಕಗಳ ಆದಾಯವಾಗಿದೆ.
10. ಉದ್ಯೋಗದ ಮೂಲಗಳು ಯಾವುವು?
ಉತ್ತರ:-ವ್ಯಕ್ತಿಗಳು ತಮ್ಮ ಜೀವನ ನಿರ್ವಹಣೆಗಾಗಿ ಅರ್ಥ ವ್ಯವಸ್ಥೆಯ ವಿವಿಧ ವಲಯಗಳಾದ ಕೃಷಿ, ಕೈಗಾರಿಕೆ ಮತ್ತು ಸೇವಾವಲಯಗಳಲ್ಲಿ ದುಡಿಯುತ್ತಾರೆ. ಕಾಲಕ್ರಮೇಣ ಕೃಷಿ ಪ್ರಧಾನ ರಾಷ್ಟ್ರಗಳು ಕೈಗಾರಿಕೆ ಹಾಗೂ ಸೇವಾವಲಯ ಪ್ರಧಾನ ರಾಷ್ಟ್ರಗಳಾಗುತ್ತಿವೆ.
11. ಸ್ಥಿರಾತ್ಮಕ ಮತ್ತು ಚಲನಾತ್ಮಕ ಅರ್ಥಶಾಸ್ತ್ರದ ವ್ಯತ್ಯಾಸ ವನ್ನು ವಿವರಿಸಿ.
ಉತ್ತರ:-ಸ್ಥಿರಾತ್ಮಕ (static) ಎಂಬ ಪದವು ಗ್ರೀಕ್ನ ಸ್ಟಾಟಿಕೆ (statike) ಎಂಬ ಪದದಿಂದ ಬಂದಿದೆ. ಸ್ಟಾಟಿಕೆ ಎಂದರೆ ಸ್ಥಿರವಾಗಿ ನಿಲ್ಲು ಎಂದರ್ಥ. ಅರ್ಥಶಾಸ್ತ್ರದಲ್ಲಿ ಇದು ಯಾವುದೇ ಬದಲಾವಣೆಗಳಿಲ್ಲದ ಸನ್ನಿವೇಶವನ್ನು ಸೂಚಿಸುತ್ತದೆ. ಸ್ಥಿರಾತ್ಮಕ ಅರ್ಥವ್ಯವಸ್ಥೆಯು ಕಾಲಾತೀತ ಅರ್ಥ ವ್ಯವಸ್ಥೆಯಾಗಿದ್ದು ಅಲ್ಲಿ ಯಾವುದೇ ಬದಲಾವಣೆ ಗಳಿರುವುದಿಲ್ಲ.
ಚಲನಾತ್ಮಕ ಎಂಬ ಪದವು ಗ್ರೀಕಿನ ‘dynamikosʼ ಎಂಬ ಪದದಿಂದ ಬಂದಿದೆ. ಇದರ ಅರ್ಥ ಶಕ್ತಿ ಶಾಲಿಯಾದ ಬದಲಾವಣೆ ಇಲ್ಲವೆ ನಿರಂತರ ಬದಲಾವಣೆಯನ್ನು ಸೂಚಿಸುತ್ತದೆ. ಚಲನಾತ್ಮಕ ಅರ್ಥಶಾಸ್ತ್ರವು ಅರ್ಥವ್ಯವಸ್ಥೆ ಯಲ್ಲಿನ ಬದಲಾವಣೆಗಳ ಅಧ್ಯಯನವನ್ನು ಸೂಚಿಸುತ್ತದೆ. ಇದು ಕಾಲದಿಂದ ಕಾಲಕ್ಕೆ ಅರ್ಥವ್ಯವಸ್ಥೆಯಲ್ಲಾಗುವ ಬದಲಾವಣೆಯ ಪ್ರಕ್ರಿಯೆಯನ್ನು ವಿಶ್ಲೇಷಿಸುತ್ತದೆ.