ಅರ್ಥಶಾಸ್ತ್ರ
ಅಧ್ಯಾಯ–14
ಅರ್ಥಶಾಸ್ತ್ರದ ಅರ್ಥ ಮತ್ತು ಮಹತ್ವ
I. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿ.
1.ಅರ್ಥಶಾಸ್ತ್ರ ಎಂಬ ಪದವು ಗ್ರೀಕ್ ಮೂಲ ಪದಗಳಾದ ಓಕೋಸ್ ಮತ್ತು ನೋಮೊಸ್ ಎಂಬ ಪದಗಳಿಂದ ಬಂದಿದೆ.
2. ಮೌರ್ಯರ ಆಸ್ಥಾನದಲ್ಲಿದ್ದ ಕೌಟಿಲ್ಯನು ರಚಿಸಿದ ಗ್ರಂಥ ಅರ್ಥಶಾಸ್ತ್ರ.
3. ಸರಕು-ಸೇವೆಗಳಲ್ಲಿರುವ ಮಾನವನ ಬಯಕೆಗಳನ್ನು ತೃಪ್ತಿಪಡಿಸುವ ಗುಣಕ್ಕೆ ತುಷ್ಟೀಗುಣ ಎನ್ನುವರು.
4. ಹಣದ ಪ್ರತಿಫಲಕ್ಕಾಗಿ ಮಾಡುವ ದೈಹಿಕ ಮತ್ತು ಬೌದ್ಧಿಕ ಕೆಲಸಕ್ಕೆ ಆರ್ಥಿಕ ಚಟುವಟಿಕೆಗಳು ಎಂದುಕರೆಯುತ್ತಾರೆ.
II. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
5. ಅರ್ಥಶಾಸ್ತ್ರ ಎಂದರೇನು?
ಉತ್ತರ:-ಮಾನವನ ದಿನನಿತ್ಯದ ಆರ್ಥಿಕ ಚಟುವಟಿಕೆಗಳನ್ನು ಕುರಿತು ಅಧ್ಯಯನ ಮಾಡುವ ಶಾಸ್ತ್ರವೇ ಅರ್ಥಶಾಸ್ತ್ರ .
6. ಅರ್ಥಶಾಸ್ತ್ರ ದ ಪಿತಾಮಹ ಎಂದು ಯಾರನ್ನು ಗುರುತಿಸಲಾಗಿದೆ ?
ಉತ್ತರ:-ಅರ್ಥಶಾಸ್ತ್ರ ದ ಪಿತಾಮಹ ಎಂದು ಆಡಂಸ್ಮಿತ್ರವರನ್ನು ಗುರುತಿಸಲಾಗಿದೆ.
7. ಆರ್ಥಿಕ ಚಟುವಟಿಕೆಗಳು ಎಂದರೇನು ?
ಉತ್ತರ:- ಹಣದ ಪ್ರತಿಫಲಕ್ಕಾಗಿ ಮಾಡುವ ದೈಹಿಕ ಮತ್ತು ಬೌದ್ಧಿಕ ಕೆಲಸಕ್ಕೆ ಆರ್ಥಿಕ ಚಟುವಟಿಕೆಗಳು ಎಂದುಕರೆಯುತ್ತಾರೆ.
8. ವಿದ್ಯಾರ್ಥಿಯೊಬ್ಬ ಪೆನ್ನು ಕೊಂಡು ಬಳಸುತ್ತಾನೆ. ಇದು ಯಾವ ಬಗೆಯ ಆರ್ಥಿಕ ಚಟುವಟಿಕೆ?
ಉತ್ತರ:- ವಿದ್ಯಾರ್ಥಿಯೊಬ್ಬ ಪೆನ್ನು ಕೊಂಡು ಬಳಸುತ್ತಾನೆ. ಇದು ಅನುಭೋಗಿ ಬಗೆಯ ಆರ್ಥಿಕ ಚಟುವಟಿಕೆ.
II. ಕೆಳಗಿನ ಪ್ರತಿಯೊಂದನ್ನು ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
9. ಮಾನವನ ಆರ್ಥಿಕ ಚಟುವಟಿಕೆಗಳು ಯಾವುವು?
ಉತ್ತರ:-ಆರ್ಥಿಕ ಚಟುವಟಿಕೆಗಳು ಯಾವುವೆಂದರೆ
ಎ) ಉತ್ಪಾದಕ ಚಟುವಟಿಕೆಗಳು : ಸರಕು ಮತ್ತು ಸೇವೆಗಳನ್ನು ಉತ್ಪಾದಿಸಲು ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳು.
ಬಿ) ಅನುಭೋಗಿ ಚಟುವಟಿಕೆ : ಉತ್ಪಾದಿಸಿದ ಸರಕು ಮತ್ತು ಸೇವೆಗಳನ್ನು ಬಳಸಿಕೊಳ್ಳುವುದೇ ಅನುಭೋಗಿ ಚಟುವಟಿಕೆ.
ಸಿ) ವಿನಿಯಮ ಚಟುವಟಿಕೆ : ಉತ್ಪಾದಿಸಿ ವಸ್ತುಗಳನ್ನು ಅನುಭೋಗಿಗಳಿಗೆ ತಲುಪಿಸಲು ಮಾರಾಟ ವ್ಯವಸ್ಥೆ ಮಾಡುವುದು. ಇಲ್ಲಿ ಸಂಗ್ರಹಣೆ, ಮಾರಾಟ, ಸಾಗಾಟ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದೇ ‘ವಿನಿಮಯ ಚಟುವಟಿಕೆ‘
ಡಿ) ವಿತರಣೆ : ಉತ್ಪಾದನೆಯಿಂದ ಬರುವ ಆದಾಯವನ್ನು ಉತ್ಪಾದನಾಂಗಗಳಿಗೆ ಹಂಚಿಕೆ ಮಾಡಬೇಕಾಗುತ್ತದೆ. ಇಲ್ಲಿ ನಡೆಯುವ ಚಟುವಟಿಕೆಯನ್ನು ವಿತರಣೆ ಚಟುವಟಿಕೆ ಎಂದು ಕರೆಯುವರು.
10. ನಾವು ಅರ್ಥಶಾಸ್ತ್ರದ ಅಧ್ಯಯನವನ್ನು ಏಕೆ ಮಾಡಬೇಕು?
ಉತ್ತರ:-ಅರ್ಥಶಾಸ್ತ್ರವು ಬಡತನ, ನಿರುದ್ಯೋಗ, ಆರ್ಥಿಕ ಅಸಮಾನತೆ ಮುಂತಾದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಅವುಗಳಿಗೆ ಪರಿಹಾರ ಕಂಡುಹಿಡಿಯಲು ಸಹಾಯ ಮಾಡುತ್ತದೆ. ನಮ್ಮಲ್ಲಿರುವ ಮಿತವಾದ ಆದಾಯದಿಂದ ಪರಿಮಿತವಾದ ಬಯಕೆಗಳನ್ನು ತೃಪ್ತಿಪಡಿಸಿಕೊಳ್ಳಲು ಮುಂದಾದಾಗ ಆಯ್ಕೆಯ ಸಮಸ್ಯೆಗಳು ಎದುರಾಗುತ್ತದೆ. ಇಂಥಹ ಸನ್ನಿವೇಶಗಳಲ್ಲಿ ಅರ್ಥಶಾಸ್ತ್ರ ಪರಿಹಾರ ನೀಡುತ್ತದೆ. ಅರ್ಥಶಾಸ್ತ್ರವು ಬೆಲೆಗಳ ಏರಿಳಿತದ ಕಾರಣಗಳು ಮತ್ತು ಪರಿಣಾಮಗಳನ್ನು ಗುರ್ತಿಸಿ ಬೆಲೆಗಳಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ವಿಷಯಗಳನ್ನು ಸೂಚಿಸುತ್ತದೆ. ಅರ್ಥಶಾಸ್ತ್ರವು ನಮ್ಮ ದಿನನಿತ್ಯದ ಬದುಕಿಗೆ ಸಹಾಯಕವಾಗಿದ್ದು ಅರ್ಥಶಾಸ್ತ್ರದ ಅಧ್ಯಯನವು ನಮಗೆ ಜ್ಞಾನದಾಯಕ ಹಾಗೂ ಆಶಾದಾಯಕವಾಗಿದೆ.
11. ಕಾಲದಿಂದ ಕಾಲಕ್ಕೆ ಅರ್ಥಶಾಸ್ತ್ರದ ಅರ್ಥ ಹೇಗೆ ಬದಲಾಗಿದೆ ?
ಉತ್ತರ:- ಅರ್ಥಶಾಸ್ತ್ರ ಎಂಬ ಪದವನ್ನು ಇಂಗ್ಲಿಷ್ ಭಾಷೆಯ ಎಕನಾಮಿಕ್ಸ್ ಎಂಬ ಪದಕ್ಕೆ ಸಮಾನಾರ್ಥಕ ಶಬ್ಧವಾಗಿ ಬಳಸಲಾಗುತ್ತಿದೆ. ಎಕನಾಮಿಕ್ಸ್ ಪದವು ಗ್ರೀಕ್ ಭಾಷೆಯ ಪ್ರಕಾರ ಕುಟುಂಬದ ನಿರ್ವಹಣೆ ಎಂದಾಗುತ್ತದೆ.
ಆದರೆ ಇದು ಕೇವಲ ಕುಟುಂಬದ ನಿರ್ವಹಣೆಯ ಅಧ್ಯಯನಕ್ಕೆ ಮಾತ್ರ ಸೀಮಿತವಾಗಿಲ್ಲ. ಕಾಲಕ್ರಮೇಣ ಅರ್ಥಶಾಸ್ತ್ರದ ವ್ಯಾಪ್ತಿ ವಿಸ್ತರಣೆಗೊಂಡು ರಾಷ್ಟ್ರ,ಅಂತಾರಾಷ್ಟ್ರೀಯ ಮಟ್ಟದವರೆಗೆ ವ್ಯಾಪಿಸಿದೆ. ಅರ್ಥಶಾಸ್ತ್ರದ ಅಧ್ಯಯನದ ವಿಷಯವು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬಂದಿದೆ. 18 ನೇ ಶತಮಾನದಲ್ಲಿದ್ದ ಅರ್ಥಶಾಸ್ತ್ರದ ಪಿತಾಮಹರೆನಿಸಿರುವ ಆಡಂಸ್ಮಿತ್ರವರು ‘ಅರ್ಥಶಾಸ್ತ್ರವು ಸಂಪತ್ತನ್ನುಕುರಿತು ಅಧ್ಯಯನ ಮಾಡುತ್ತದೆ’ಎಂದು ಹೇಳಿದ್ದಾರೆ.