೧. ಕನ್ನಡಿಗರ ತಾಯಿ
ಅಭ್ಯಾಸ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ:
1. ನಮ್ಮನ್ನು ಆಳುವವಳು ಯಾರು?
ಉತ್ತರ:-ನಮ್ಮನ್ನು ಆಳುವವಳು “ಕನ್ನಡ ತಾಯಿ”.
2. ಲತೆ ಯಾವುದನ್ನೆಲ್ಲಾ ನೀಡುತ್ತದೆ?
ಉತ್ತರ:-ಸೊಗಸಾದ ಎಲೆಗಳು (ಪತ್ರೆಗಳು) ಹೂಗಳನ್ನೆಲ್ಲಾ ಲತೆ ನೀಡುತ್ತದೆ.
3. ಕನ್ನಡ ತಾಯಿಯ ಬಸಿರ ಹೊನ್ನಗನಿ ಯಾರು?
ಉತ್ತರ:-ವಿದ್ಯಾರಣ್ಯರು ಕನ್ನಡ ತಾಯಿಯ ಬಸಿರ ಹೊನ್ನಗನಿ.
4. ಕನ್ನಡ ತಾಯಿಯ ಹಾಡನ್ನು ಯಾವುದರಿಂದ ಉಕ್ಕಿಸ ಬೇಕು?
ಉತ್ತರ:-ಕನ್ನಡ ತಾಯಿಯ ಹಾಡನ್ನು ಹೊಸದಾದ ಕಿನ್ನರಿಯಲ್ಲಿ ಉಕ್ಕಿಸಬೇಕು.
5. ಕನ್ನಡಿಗರ ಪಾಡು ಏನು?
ಉತ್ತರ:-ತಮ್ಮಲ್ಲಿರುವ ಕಂಪನ್ನು ಮರೆತು, ಬೇರೆಡೆ ಕಂಪನ್ನು ಹುಡುಕುತ್ತಿರುವುದೇ ಕನ್ನಡಿಗರ ಪಾಡು.
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು / ಮೂರು ವಾಕ್ಯಗಳಲ್ಲಿ ಉತ್ತರಿಸಿ:
1. ಕನ್ನಡನಾಡಿನ ಪ್ರಕೃತಿ ವೈಶಿಷ್ಟವೇನು?
ಉತ್ತರ:-ಕನ್ನಡ ನಾಡಿನ ಪ್ರಕೃತಿಯು ವೈಭವದಿಂದಲೂ, ವಿಶಿಷ್ಟತೆಯಿಂದಲೂ ಕೂಡಿದೆ. “ಹಣ್ಣು – ಕಾಯಿಗಳನ್ನು ಹೊತ್ತ ಬಗೆ ಬಗೆಯ ಮರಗಳು ಪತ್ರ ಪುಷ್ಪಗಳಿಂದ ಅಲಂಕೃತಗೊಂಡ ಲತೆಗಳು, ಹಾಲುಕೆನೆಯಿಂದ ತುಂಬಿಕೊಂಡು ಗಾಳಿಗೆ ತೊಯ್ದಾಡುವ ತೆನೆಗಳು, ನದಿಗಳಿಂದ – ಪರ್ವತದ ಸಾಲುಗಳಿಂದ ಕಂಗೊಳಿಸುವ ಈ ಕನ್ನಡನಾಡಿನ ಭೂಮಿಗೆ ಆಕಾಶದಿಂದ ಹಾಲು ಜೇನು ಸುರಿದಂತೆ ಕಾಣಬರುತ್ತಿದೆ. ಇಂಥಹ ಪ್ರಕೃತಿಯ ವೈಭವ – ಸೌಂದರ್ಯ ಇಲ್ಲಿ ಅಲ್ಲದೆ ಮತ್ತೆಲ್ಲಿ ಸಿಗಲು ಸಾಧ್ಯ?” ಎಂದು ಕವಿ ವರ್ಣಿಸಿದ್ದಾರೆ.
2. ಕನ್ನಡದ ಕವಿ ಶ್ರೇಷ್ಟರ ಹಿರಿಮೆಯೇನು?
ಉತ್ತರ:-ಕನ್ನಡದ ಕವಿ ಶ್ರೇಷ್ಠರ ಹಿರಿಮೆ ಗರಿಮೆ ವರ್ಣಿಸಲಸಾಧ್ಯ. ಏಕೆಂದರೆ ಕನ್ನಡದ ಕವಿ ಶ್ರೇಷ್ಟರು ಸಾಹಿತ್ಯ ಕ್ಷೇತ್ರದೊಂದಿಗೆ ಧಾರ್ಮಿಕತೆಯನ್ನು ಮೇಳವಿಸಿದ್ದಾರೆ. ಪೂಜ್ಯರಾದ ಕೊಂಡಕುಂದವರ್ಯರು ಜೈನಧರ್ಮವನ್ನು ಉಜ್ವಲಗೊಳಿಸಿದರು. ಮಧ್ವಾಚಾರ್ಯರಂತಹ ಯತಿಶ್ರೇಷ್ಟರು, ಬಸವಣ್ಣನಂತಹ ಜ್ಞಾನಿ, ಸಮಾಜ ಸುಧಾರಕರು, ರಾಜನೃಪತುಂಗ ಆದಿಕವಿ ಪಂಪ, ರನ್ನ, ಜನ್ನರಂತಹ ರತ್ನತ್ರೇಯರು, ಲಕ್ಷ್ಮೀಪತಿ, ಷಡಕ್ಷರಿ, ಮುದ್ದಣರಂಥಹ ಕವಿ ಶ್ರೇಷ್ಠರು, ಪುರಂದರ ದಾಸರಂಥಹ ದಾಸವರೇಣ್ಯರು, ಹೊನ್ನಿನಗಣಿಯಂತಿರುವ ವಿದ್ಯಾರಣ್ಯರನ್ನು ಕನ್ನಡಮಾತೆ ಜನ್ಮ ಕೊಟ್ಟಿದ್ದಾಳೆ ಎಂಬುದಾಗಿ ಕನ್ನಡದ ಕವಿ ಶ್ರೇಷ್ಟರ ಹಿರಿಮೆಯನ್ನು ಹೊಗಳಿದ್ದಾರೆ.
3. ಕವಿ ಕನ್ನಡದ ಹೆಸರನ್ನು ಹೇಗೆ ಹಬ್ಬಿಸಬೇಕೆಂದು ಆಶಿಸು ತ್ತಾರೆ?
ಉತ್ತರ:-ಕನ್ನಡ ಕಸ್ತೂರಿಯು ನಮ್ಮೊಳಗಿದ್ದು, ಅದರಲ್ಲಿರುವ ಕಂಪನ್ನು ಅರಿಯದೆ ಬೇರೆಡೆ ಹುಡುಕುವುದನ್ನು ಬಿಟ್ಟು, ನಮ್ಮ ಕನ್ನಡದ ಸಿರಿಯನ್ನು, ಅದರ ಸೊಬಗನ್ನು ಎಲ್ಲೆಡೆ ಅದರ ಕಂಪನ್ನು – ಸುಂಗಧವನ್ನು ಹಬ್ಬಿಸಬೇಕೆಂದು ಕವಿ ಆಶಿಸುತ್ತಾರೆ. ಅದಕ್ಕಾಗಿ ಆ ಕನ್ನಡವು ಎಲ್ಲರ ಬಾಯಲ್ಲಿಯೂ ನಲಿದಾಡಬೇಕು, ಎಲ್ಲರ ಮನದಾಳದಲ್ಲಿ ನೆಲೆಸಬೇಕು ಎಂಬ ಆಶಯವನ್ನು ಕವಿ ವ್ಯಕ್ತ ಪಡಿಸಿದ್ದಾರೆ.
ಇ. ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು / ಐದು ವಾಕ್ಯಗಳಲ್ಲಿ ಉತ್ತರಿಸಿ.
1. ಕನ್ನಡ ತಾಯಿಯನ್ನು ಮರೆಯಲು ಸಾಧ್ಯವಿಲ್ಲ. ಏಕೆ?
ಉತ್ತರ:-ನಾವು ಎಂದಿಗೂ, ಎಂದೆಂದಿಗೂ ಕನ್ನಡ ತಾಯಿಯನ್ನು ಮರೆಯಲು ಸಾಧ್ಯವಿಲ್ಲ. ಏಕೆಂದರೆ ಕನ್ನಡ ತಾಯಿ – ನಮ್ಮ ಜನ್ಮದಾತೆ. ಆಕೆ ನಮ್ಮನ್ನು ತಾಯಿ ಮಕ್ಕಳನ್ನು ಹರಸುವಂತೆ, ಹಾರೈಸುವವಳು, ನಮ್ಮ ತಪ್ಪುಗಳನ್ನು ತಾಳ್ಮೆಯಿಂದ ಕ್ಷಮಿಸುವವಳು, ಅಕ್ಕರೆಯಿಂದ, ಪ್ರೀತಿ ವಾತ್ಸಲ್ಯಗಳಿಂದ ನಮ್ಮನ್ನು ಕಾಪಾಡುವವಳು, ನಮ್ಮ ಬಾಳೆ ಅವಳಾಗಿರುವಳು. ನಮ್ಮ ತನು – ಮನ ನಡೆ – ನುಡಿ ಎಲ್ಲವೂ ಕನ್ನಡವಾಗಿರುವಾಗ ನಾವು ಹೇಗೆ ತಾನೇ ಅವಳನ್ನು ಮರೆಯಲು ಸಾಧ್ಯ? ಎಂದು ಕವಿ ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
2. ಕವಿ ಕನ್ನಡ ತಾಯಿಯಲ್ಲಿ ಏನೆಂದು ಕೋರುತ್ತಾರೆ?
ಉತ್ತರ:-ಕನ್ನಡ ತಾಯಿ ತನ್ನ ಮುಖವನ್ನು ತೋರುವ ಮೂಲಕ ಕನ್ನಡದ ಮಕ್ಕಳನ್ನು ಒಂದಾಗಿಸಬೇಕು. ಕನ್ನಡ ಕಸ್ತೂರಿಯ ಕಂಪು ಜಗತ್ತಿನಾದ್ಯಂತ ಪಸರಿಸುವಂತಾಗಬೇಕು. ಕನ್ನಡ ನಾಡಿನ ಎಲ್ಲಾ ಮಕ್ಕಳಲ್ಲಿಯೂ (ಕನ್ನಡ ಮಾತೆಗೆ ಕನ್ನಡಿಗರೆಲ್ಲರೂ ಮಕ್ಕಳೇ) ಕನ್ನಡ ಅವರ ಮನದಾಳದಲ್ಲಿ ಬೇರೂರಬೇಕು, ಎಲ್ಲರ ಬಾಯಲ್ಲಿಯೂ ಕನ್ನಡ ನಲಿದಾಡಬೇಕು, ಕನ್ನಡ ಕಸ್ತೂರಿಯ ಕನ್ನಡಿಗರ ನಡೆ ನುಡಿ, ಆಚಾರ – ವಿಚಾರಗಳಲ್ಲಿ ನೆಲೆಯಾಗಬೇಕು. ಕನ್ನಡಿಗರ ತನು – ಮನಗಳು ಕನ್ನಡದ ಕಂಪಿನೊಂದಿಗೆ ಬೆಸ ಗೊಳಬೇಕು” ಎಂಬುದಾಗಿ ಕವಿ ಆಶಿಸುತ್ತಾ ಈ ರೀತಿ ಬರೆದಿದ್ದಾರೆ. ‘ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೇ! ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೇ!” ಎಂದು ಕವಿ ಕನ್ನಡ ತಾಯಿಯನ್ನು ಕೋರುತ್ತಾರೆ.
3. “ಗೋವಿಂದ ಪೈ” ರವರ ಪ್ರಮುಖ ಕೃತಿಗಳಾವುವು?
ಉತ್ತರ:-ಶ್ರೀಯವರು ರಚಿಸಿರುವ ಪ್ರಮುಖ ಕೃತಿಗಳೆಂದರೆ
ಕವನ ಸಂಕಲನಗಳು :
1. ಗಿಳಿವಿಂಡು
2. ಚಿತ್ರಭಾನು
3. ನಂದಾದೀಪ
* ನವೀನ ಚಂದ್ರಸೇನರ ಬಂಗಾಳಿ ಕೃಷ್ಣ ಚರಿತೆಯ- ಗದ್ಯಾನುವಾದ.
* “ಸಿಂಗಾಲ ಸುತ್ತ” ಬೌದ್ಧ ಸೂತ್ರಗಳ ಕನ್ನಡ ಅನುವಾದ.
* “ಗೊಮ್ಮಟ ಜೀನಸ್ತುತಿ” – 35 ವೃತ್ತಗಳುಳ್ಳ ಪ್ರಾಸ ರಹಿತ, ಕೃತಿ
*ರವೀಂದ್ರನಾಥ ಠಾಕೂರ್, ಅಹಮ್ಮದ್ ಇಟ್ಬಾಲ್ ,ಉಮರ್ ಖಯ್ಯಾಮ್ ರೂಬಾಯಿಗಳ ಭಾಷಾಂತರ
* ವೈಶಾಖ ಮತ್ತು ಗೊಲ್ಗೊಥಾ ಖಂಡ ಕಾವ್ಯ
* ನೋ ನಾಟಕ – ಜಪಾನ್ ಕೃತಿಯ ಕನ್ನಡ ಅನುವಾದ ಮುಂತಾದ ಕೃತಿ ರಚಿಸಿದ್ದಾರೆ.
ಈ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1. ಕನ್ನಡಿಗರ ತಾಯಿ ಮೊಗ ತೋರಬೇಕೆಂದು ಕವಿ ಏಕೆ ಬಯಸುತ್ತಾರೆ?
ಉತ್ತರ:-ಕನ್ನಡಿಗರ ತಾಯಿ ಮೊಗ ತೋರಬೇಕೆಂದು ಕವಿ ಬಯಸುತ್ತಾರೆ. ಏಕೆಂದರೆ “ಕನ್ನಡ ತಾಯಿ ತನ್ನ ಮುಖವನ್ನು ತೋರುವ ಮೂಲಕ ಕನ್ನಡದ ಮಕ್ಕಳನ್ನು ಒಂದಾಗಿಸಬೇಕು” ಎಂಬುದು ಕವಿಯ ಬಯಕೆಯಾಗಿದೆ.ಕನ್ನಡನಾಡು ಸಂಪದ್ಭರಿತವು ಪ್ರಕೃತಿಯ ಸೌಂದರ್ಯದ ಬೀಡಾಗಿದೆ. ಕನ್ನಡ ತಾಯಿಯ ಮುಖ ಕಂಡಾಗ ಅದೆಲ್ಲವೂ ಗೋಚರವಾಗುತ್ತದೆ. ಹೀಗೆ ಗೋಚರಿಸಿದಾಗ ಮಾತ್ರ ಕನ್ನಡ ತಾಯಿಯ ಕೀರ್ತಿ ಜಗತ್ತಿನಾದ್ಯಂತ ಪಸರಿಸಲು ಸಾಧ್ಯ. ಅದಕ್ಕಾಗಿ ಕನ್ನಡ ತಾಯಿ ಎಲ್ಲರ ನಡೆ ನುಡಿ, ಆಚಾರ ವಿಚಾರಗಳಲ್ಲಿ ನೆಲೆಯಾಗಬೇಕು. ಕನ್ನಡ ತಾಯಿ ಜನ್ಮದಾತೆ ಆಗಿರುವುದರಿಂದಲೇ ಅವಳ ಹರಕೆ – ಹಾರೈಕೆ ನಮ್ಮ ಶ್ರೀ ರಕ್ಷೆಯಾಗಿ ಇರುತ್ತದೆ. ಆದ್ದರಿಂದ ಕವಿ, ಕನ್ನಡ ತಾಯಿ ಮೊಗ ತೋರೆಂದು ಈ ರೀತಿ ಭಿನ್ನವಿಸಿಕೊಂಡಿದ್ದಾರೆ ‘ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೇ! ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೇ!” ತಾಳ್ಮೆಯಿಂದ ನಮ್ಮ ತಪ್ಪನ್ನು ಕ್ಷಮಿಸುವವಳು, ಅಕ್ಕರೆಯಿಂದ ನಮ್ಮನ್ನು ಆಳುವವಳು. ಎಲ್ಲಕ್ಕಿಂತ ನಮ್ಮ ಬಾಳು ಕೂಡ ಅವಳೇ ಆಗಿದ್ದಾಳೆ”. ಆದ್ದರಿಂದ ಕನ್ನಡಿಗರ ತಾಯಿ ಮೊಗ ತೋರಬೇಕೆಂದು ಕವಿ ಬಯಸುತ್ತಾರೆ.
2. ಕನ್ನಡ ನಾಡಿನ ಕವಿ ಹಾಗೂ ಕಲೆಯ ಮಹತ್ವವೇನು? ವಿವರಿಸಿ.
ಉತ್ತರ:-ನಮ್ಮ ಕನ್ನಡನಾಡು ಕವಿಗಳ ಬೀಡು, ಕಲೆಯ ತವರು ಆಗಿದೆ. ಅಂದ ಮೇಲೆ ಇದರ ಮಹತ್ವ ಅಜರಾಮರ. ನಮ್ಮ ಕನ್ನಡನಾಡಿನ ಕವಿಗಳು ಆಧ್ಯಾತ್ಮಿಕತೆಯಲ್ಲಿ ಶ್ರದ್ದೆ ಭಕ್ತಿಯುಳ್ಳವರು ಹಾಗೂ ಸಾಹಿತ್ಯ ಕಲಾ ಸರಸ್ವತಿಯ ವರಪುತ್ರರೂ ಆಗಿರುವರು.
ಕವಿ, ಅವರಲ್ಲಿ ಕೆಲವರನ್ನು ಉದಾಹರಿಸಿದ್ದಾರೆ. ಜೈನ ಧರ್ಮದ ಮೂಲ ಪುರುಷರಾದ ಪೂಜ್ಯನೀಯ ಕೊಂಡಕುಂದವರ್ಯರು, ಮಧ್ವಯತಿಗಳು, ಬಸವಣ್ಣನಂಥಹ ಮಹಾಪುರುಷರು ,ಪಂಪ, ರನ್ನ ಜನ್ನ ಎಂಬ ರತ್ನತ್ರಯರು, ಲಕ್ಷ್ಮೀಪತಿ, ಷಡಕ್ಷರಿ, ಮುದ್ದಣನಂಥಹ ಮಹಾನ್ ಕವಿಗಳು, ಪುರಂದರ ದಾಸರಂಥಹ ದಾಸ ವರೇಣ್ಯರು, ಹೊನ್ನಿನ ಗಣಿಗಳೇ ಆದ ವಿದ್ಯಾರಣ್ಯರು ಕನ್ನಡ ಮಾತೆಯ ವರ ಪುತ್ರರಾಗಿದ್ದಾರೆ.
ಕವಿ ಶ್ರೇಷ್ಠರಿಂದ ರೂಪುಗೊಂಡ ಕನ್ನಡ ನಾಡು ಕಲೆಯ ತವರೂರಲ್ಲೇ ಹೂವಾಗಿ ಅರಳಿರುವ ಕಲೆ ನಮ್ಮದು. ಇದಕ್ಕೆ ಸಾಕ್ಷಿ ವಿಶ್ವ ವಿಖ್ಯಾತ ಬೇಲೂರು – ಹಳೇಬೀಡು, ಶಿಲ್ಪಕಲೆಯ ತವರು. ಧೀಮಂತವಾಗಿ ನಿಂತಿರುವ ಕಾರ್ಕಳ ಹಾಗೂ ಶ್ರವಣ ಬೆಳಗೊಳದ ಗೊಮ್ಮಟ ಮೂರ್ತಿ ವಿಶ್ವದಲ್ಲಿ ಇನ್ನೆಲ್ಲೂ ಕಾಣ ಸಿಗದಿರುವ ಅತ್ಯಮೂಲ್ಯ ಕಲಾ ವೈಭವಗಳಾಗಿವೆ.
ಉ. ಸಂದರ್ಭಾನುಸಾರ ವಿವರಿಸಿ:
1. “ಖಗ ಮೃಗೋರಗಾಳಿಯೋ”
ಉತ್ತರ:-ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ರಾಷ್ಟ್ರಕವಿ ಎಂ. ಗೋವಿಂದ ಪೈ ರವರು ರಚಿಸಿರುವ “ಕನ್ನಡಿಗರ ತಾಯಿ” ಎಂಬ ಕವನದಿಂದ ಆರಿಸಲಾಗಿದೆ.
ಸಂದರ್ಭ: ಕವಿ ಕನ್ನಡ ನಾಡಿನ ಪ್ರಕೃತಿಕ ಸೌಂದರ್ಯವನ್ನು ವರ್ಣಿಸುತ್ತಾ ಇಲ್ಲಿ ಪಶು – ಪಕ್ಷಿಗಳನ್ನು ಹೆಸರಿಸುವ ಸಂದರ್ಭದಲ್ಲಿ ಈ ಮೇಲ್ಕಂಡ ವಾಕ್ಯ ಬರೆದಿದ್ದಾರೆ.
ವಿವರಣೆ : “ಪ್ರಾಣಿಪಕ್ಷಿ ಹಾವುಗಳ ಸಮೂಹ“ದಿಂದ ನಮ್ಮ ಪ್ರಕೃತಿಯ ಅರಣ್ಯ ಕಂಗೊಳಿಸುತ್ತಿತ್ತು.
ವಿಶೇಷತೆ : ಕವಿಯ ಶಬ್ದ ಚಾತುರ್ಯ ಇದರಲ್ಲಿ ವ್ಯಕ್ತವಾಗಿದೆ. ಸಮಾಸಯುಕ್ತ ಶಬ್ಧವಾಗಿದೆ, ಭಾಷೆ ಸರಳವಾಗಿದೆ.
2. “ನಿನ್ನ ಕಲ್ಲೆ ನುಡಿವುದಲ್ಲ!”
ಉತ್ತರ:-ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ರಾಷ್ಟ್ರಕವಿ ಎಂ. ಗೋವಿಂದ ಪೈ ರವರು ರಚಿಸಿರುವ “ಕನ್ನಡಿಗರ ತಾಯಿ” ಎಂಬ ಕವನದಿಂದ ಆರಿಸಲಾಗಿದೆ.
ಸಂದರ್ಭ : ಕನ್ನಡ ನಾಡಿನ ಕಲಾ ವೈಭವವನ್ನು ವೈಭವೀಕರಿಸುತ್ತಾ ಕವಿ ಈ ವಾಕ್ಯವನ್ನು ನುಡಿದಿದ್ದಾರೆ.
ವಿವರಣೆ : ಕನ್ನಡ ನಾಡು ಕಲೆಗಳ ತವರೂರು, ಇದಕ್ಕೆ ಸಾಕ್ಷಿ. ಬೇಲೂರು ಹಳೆಬೀಡಿನ ಶಿಲ್ಪ ಕಲಾ ವೈಭವ – ಒಂದೆಡೆಯಾದರೆ, ಕಾರ್ಕಳ – ಶ್ರವಣ ಬೆಳಗೊಳದ ಭವ್ಯ ಗೊಮ್ಮಟ ಮೂರ್ತಿಗಳು ಇವು – “ಇಲ್ಲಿರುವ ಶಿಲ್ಪಕಲೆ
ಜಗತ್ತಿನಲ್ಲೆಲ್ಲೂ ಇಲ್ಲ ಎಂಬುದನ್ನು ಇಲ್ಲಿಯ ಕಲೆಯ ಕಲ್ಲೇ
ನುಡಿಯುತ್ತಿವೆ” ಎಂಬುದಾಗಿ ಕವಿ ಬಣ್ಣಿಸಿದ್ದಾರೆ.
ವಿಶೇಷತೆ : ಕಲೆಯ ವೈಶಿಷ್ಟತೆಯನ್ನು ಸರಳ ಸುಂದರ ಭಾಷಾ ಶೈಲಿಯಲ್ಲಿ ವೈಭವೀಕರಿಸಲಾಗಿದೆ.
3. “ನಮ್ಮ ಮನಮನೊಂದೆ ಕಲಸು!”
ಉತ್ತರ:-ಪ್ರಸ್ತಾವನೆ : ಪ್ರಸ್ತುತ ಈ ಮೇಲ್ಕಂಡ ಸಾಲುಗಳನ್ನು ರಾಷ್ಟ್ರಕವಿ ಎಂ. ಗೋವಿಂದ ಪೈ ರವರು ರಚಿಸಿರುವ “ಕನ್ನಡಿಗರ ತಾಯಿ” ಎಂಬ ಕವನದಿಂದ ಆರಿಸಲಾಗಿದೆ.
ಸಂದರ್ಭ: ಕನ್ನಡ ಕಸ್ತೂರಿಯ ಕಂಪು ಜಗಕ್ಕೆಲ್ಲ ಪಸರಿಸ ಬೇಕಾದರೆ ಮೊದಲು ಅದು ಕನ್ನಡಿಗರ ಎದೆಯಲ್ಲಿ ನೆಲೆಯಾಗಬೇಕು, ಎಲ್ಲರ ಬಾಯಲ್ಲಿ ನಲಿದಾಡಬೇಕು ಎಂದೆತನ್ನುತ ಕವಿ ಈ ಮೇಲ್ಕಂಡ ವಾಕ್ಯವನ್ನು ಬರೆದಿದ್ದಾರೆ.
ವಿವರಣೆ : ಕವಿ, ಕನ್ನಡ ತಾಯಿಯನ್ನು, ಕನ್ನಡವೂ ಸದಾ ನಮ್ಮೆದೆಯಲ್ಲಿ ಉಳಿಯುವಂತೆ, ಎಲ್ಲಾ ಕನ್ನಡಿಗರ ಬಾಯಲ್ಲಿ ನಲಿದಾಡುವಂತೆ, ತಮ್ಮ ಮನದಾಳದಲ್ಲಿ ಕನ್ನಡ ಬೇರೂರಿಸುವಂತೆ, ವಿನಮ್ರವಾಗಿ ಕೋರುತ್ತಿದ್ದಾರೆ.
ವಿಶೇಷತೆ : ಸರಳವಾದ ಭಾಷೆಯಲ್ಲಿ ಅಭಿವ್ಯಕ್ತಗೊಂಡ ಭಾವಪೂರ್ಣವಾಗಿ ವ್ಯಕ್ತವಾಗಿದೆ.
ಉ) ಹೊಂದಿಸಿ ಬರೆಯಿರಿ:
೧) ಬೇಲನಾಡು ಅ) ಬಾಹುಬಲಿ
೨) ಶರ್ವ ಆ) ಖಂಡಕಾವ್ಯ
೩) ಗೋಲ್ಗೊಥಾ ಇ) ಕವನ ಸಂಕಲನ
೪) ಗಿಳಿವಿಂಡು ಈ) ಹಳೆಬೀಡು
ಉ) ಬೇಲೂರು
ಊ) ನೃಪತುಂಗ
ಉತ್ತರ:-
೧) ಬೇಲನಾಡು ಉ) ಬೇಲೂರು
೨) ಶರ್ವ ಊ) ನೃಪತುಂಗ
೩) ಗೋಲ್ಗೊಥಾ ಆ) ಖಂಡಕಾವ್ಯ
೪) ಗಿಳಿವಿಂಡು ಇ) ಕವನ ಸಂಕಲನ
ಋ) ಬಿಟ್ಟ ಸ್ಥಳ ತುಂಬಿ:
೧) ಹರಸು ತಾಯೆ ಸುತರ ಕಾಯೆ
೨) ಹಾಲು ಹರಿವ ದವಂ ಭೂಮಿಗಳಿದುದೆ?
೩) ಜೈನರಾದ ಪೂಜ್ಯಪಾದ ಕೊಂಡಕುಂದವರ್ಯರ
೪) ಮೃಗದ ಸೇಡು ನಮ್ಮ ನಾಡು.
ಸೈದ್ಧಾಂತಿಕ ಭಾಷಾಭ್ಯಾಸ
ಈ ಕೆಳಗಿನ ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ.
೧. ಮಾತು ಬೆಳ್ಳಿ; ಮೌನ ಬಂಗಾರ.
ಉತ್ತರ:-“ಮಾತು ಬೆಳ್ಳಿ; ಮೌನ ಬಂಗಾರ” ಎಂಬ ನಾಣ್ಣುಡಿಯಲ್ಲಿ ಮಾತು ಅದರ ಮೌಲ್ಯವನ್ನು ಹೊಂದಿದ್ದರೂ, ಮೌನವು ಹೆಚ್ಚಿನ ಮಹತ್ವ ಮತ್ತು ಮೌಲ್ಯವನ್ನು ಹೊಂದಿದೆ ಎಂದು ಸೂಚಿಸುತ್ತದೆ.
“ಬೆಳ್ಳಿ” ಎಂದು ಪ್ರತಿನಿಧಿಸುವ ಮಾತು ಸಂವಹನ ಮತ್ತು ಅಭಿವ್ಯಕ್ತಿಯನ್ನು ಸೂಚಿಸುತ್ತದೆ, ಇದು ಆಲೋಚನೆಗಳು, ಭಾವನೆಗಳು ಮತ್ತು ಮಾಹಿತಿಯನ್ನು ತಿಳಿಸಲು ಅವಶ್ಯಕವಾಗಿದೆ.
ಬೆಳ್ಳಿ ಮೌಲ್ಯಯುತವಾಗಿದೆ, ದೈನಂದಿನ ಸಂವಹನಗಳು, ಚರ್ಚೆಗಳು ಮತ್ತು ಸಂಬಂಧಗಳಲ್ಲಿ ಆಲೋಚನೆಗಳು ಮತ್ತು ಭಾವನೆಗಳನ್ನು ಪರಿಣಾಮಕಾರಿಯಾಗಿ ತಿಳಿಸಲು ಮಾತು ಮುಖ್ಯ.
ಆದಾಗ್ಯೂ, ಬಂಗಾರ ಎಂದು ಉಲ್ಲೇಖಿಸಲಾದ ಮೌನವು ಕೆಲವು ಸಂದರ್ಭಗಳಲ್ಲಿ ಮೌನವಾಗಿ ಉಳಿಯುವುದು ಅಥವಾ ಮಾತಿನಿಂದ ದೂರವಿರುವುದು ಪ್ರಾಮುಖ್ಯತೆ ಮತ್ತು ಸದ್ಗುಣವನ್ನು ಸೂಚಿಸುತ್ತದೆ
ಮೌನವನ್ನು ಸಂಕೇತಿಸುವ ಚಿನ್ನವು ಬೆಳ್ಳಿಗಿಂತ ಹೆಚ್ಚು ಅಮೂಲ್ಯ ಮತ್ತು ಅಪರೂಪವಾಗಿದೆ, ಮೌನದ ಕ್ಷಣಗಳು ಹೆಚ್ಚು ಆಳವಾದ ಮತ್ತು ಪ್ರಭಾವಶಾಲಿಯಾಗಿರಬಹುದು ಎಂದು ಸೂಚಿಸುತ್ತದೆ.
ಮೌನವು ಪ್ರತಿಬಿಂಬ, ಆತ್ಮಾವಲೋಕನ ಮತ್ತು ಆಳವಾದ ತಿಳುವಳಿಕೆಗೆ ಅವಕಾಶ ನೀಡುತ್ತದೆ, ಮಾತು ಕೆಲವೊಮ್ಮೆ ತರಬಹುದಾದ ಗೊಂದಲಗಳು ಅಥವಾ ಸಂಭಾವ್ಯ ತಪ್ಪುಗ್ರಹಿಕೆಗಳು ಮೌನ ತರುವುದಿಲ್ಲ.
೨. ಕೈ ಕೆಸರಾದರೆ ಬಾಯಿ ಮೊಸರು.
ಉತ್ತರ:-ಈ ಗಾದೆಯು ಕಷ್ಟಪಡದೇ ಸುಖ ಸಿಗುವುದಿಲ್ಲ ಎಂಬುದನ್ನು ಧ್ವನಿಪೂರ್ಣವಾಗಿ ಹೇಳುತ್ತದೆ. ಕೈ ವೈಜ್ಞಾನಿಕ ಕೆಸರಾಗುವುದು ದುಡಿಮೆಯನ್ನು ಸಂಕೇತಿಸಿದರೆ ಮೊಸರು ಎಂಬುದು ಅದರ ಪ್ರತಿಫಲವನ್ನು ಬಿಂಬಿಸುತ್ತದೆ. ಬಸವಣ್ಣನವರ ‘ಕಾಯಕವೇ ಕೈಲಾಸ’ ಎಂಬ ಮಾತು ಮೇಲಿನ ಗಾದೆಯನ್ನು ಪುಷ್ಟಿಕರಿಸುತ್ತದೆ.
೩. ಕುಂಬಾರನಿಗೆ ವರುಷ; ದೊಣ್ಣೆಗೆ ನಿಮಿಷ.
ಉತ್ತರ:-ಸಾಕಷ್ಟು ಸಮಯ ಬಳಸಿ ಶ್ರಮವಹಿಸಿ ಮಾಡಿದ ಕೆಲಸವನ್ನು ಹಾಳು ಮಾಡಲು ಕೆಲವೇ ಕ್ಷಣಗಳು ಸಾಕು ಎನ್ನುವುದನ್ನು ಈ ಗಾದೆ ತಿಳಿಸುತ್ತದೆ.
ಮಡಿಕೆ ಮಾಡಲು ಕುಂಬಾರ ತುಂಬ ಶ್ರಮಪಡಬೇಕು. ಎರೆಮಣ್ಣನ್ನು ತಂದು, ಅದರಲ್ಲಿರುವ ಮರಳು-ಕಲ್ಲುಗಳನ್ನು ಬೇರ್ಪಡಿಸಿ ಹುಡಿ ಮಾಡಬೇಕು. ನೀರು ಹಾಕಿ ತುಳಿದು ತುಳಿದು ಹದ ಮಾಡಬೇಕು. ಕೈಕಾಲುಗಳಿಗೆ ಕೆಸರು ಮೆತ್ತಿಕೊಳ್ಳಬೇಕು. ಹದವಾದ ಮಣ್ಣನ್ನು ತಿಗುರಿಯ ಮೇಲಿಟ್ಟು ತಿರುಗಿಸಿ, ಆಕಾರ ಕೊಡಬೇಕು. ನೀರಿನ ಪಸೆ ಆರಿದ ಮೇಲೆ ಅದನ್ನು ತಟ್ಟಿತಟ್ಟಿ ಬೇಕಾದ ರೂಪಕೊಟ್ಟು ಬಿಸಿಲಿನಲ್ಲಿ ಒಣಗಲು ಬಿಡಬೇಕು. ಆಮೇಲೆ ಅದನ್ನು ಸುಡಬೇಕು. ಹದವಾಗಿ ಸುಟ್ಟು ಬಿಸಿ ಆರಿದ ಗಡಿಗೆ ಮಡಿಕೆಗಳನ್ನು ಎಚ್ಚರದಿಂದ ಹೊರತೆಗೆದು ಜೋಡಿಸಿಡಬೇಕು. ಇಷ್ಟೆಲ್ಲ ಕಷ್ಟಪಟ್ಟು ಕುಂಬಾರ ತಯಾರಿಸಿದ ಗಡಿಗೆಯನ್ನು ಪುಡಿ ಮಾಡಲು ದೊಣ್ಣೆಗೆ ಒಂದು ನಿಮಿಷವೂ ಬೇಕಾಗುವುದಿಲ್ಲ ಒಂದೇ ಏಟು ಜೋಡಿಸಿಟ್ಟ ಗಡಿಗೆಗಳನ್ನೆಲ್ಲ ಹಾಳು ಮಾಡಲು ಸಾಕು. ಯಾವುದನ್ನಾದರೂ ಹಾಳುಗೆಡಿಸುವುದು ಸುಲಭ, ರೂಪಿಸುವುದು ಕಷ್ಟ.
೪. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ.
ಉತ್ತರ:-ಇಲ್ಲಿ ಗಿಡ ಎಂದರೆ ಚಿಕ್ಕ ಸಸಿ ಅದನ್ನು ನಮಗೆ ಬೇಕಾದಂತೆ ಬಗ್ಗಿಸಿಕೊಳ್ಳಬಹುದು. ಅದೇ ಸಸಿ ಬೆಳೆದು ದೊಡ್ಡದಾಗಿ ಮರವಾದರೆ ಅದನ್ನು ಬಗ್ಗಿಸಲು, ಸಾಧ್ಯವೇ ಇಲ್ಲ.
ಇದನ್ನು ಮನುಷ್ಯನ ಜೀವನಕ್ಕೆ ಹೋಲಿಸಿ ಹೇಳಲಾಗಿದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಒಳ್ಳೆಯ ಗುಣಗಳನ್ನು ಕಲಿಸಿ ಕೊಡಬೇಕು, ತಂದೆ – ತಾಯಿ, ಅಜ್ಜ – ಅಜ್ಜಿಯರನ್ನು ಅನುಕರಣೆ ಮಾಡುತ್ತ, ಹಿರಿಯರು ಹೇಳಿ ಕೊಟ್ಟದನ್ನು ಬಹಳ ಬೇಗ ಕಲಿಯುತ್ತದೆ. ಅದರ ಬದಲು ಸುಳ್ಳು ಹೇಳುವುದು, ಕಳ್ಳತನ ಮಾಡುವುದು ಮಾಡಿದರೆ ಮುಂದೆ ಅದನ್ನೇ ಮಕ್ಕಳು ಮಾಡುವ ಗುಣ ಬೆಳಸಿಕೊಳ್ಳುವರು.
೫. ಹಾಸಿಗೆ ಇದ್ದಷ್ಟು ಕಾಲು ಚಾಚು.
ಉತ್ತರ:-ಮನುಷ್ಯ ತನ್ನ ಇತಿಮಿತಿಗಳನ್ನು ಗಮನಿಸಿ ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕೆಂಬುದನ್ನು ಈ ಗಾದೆ ತಿಳಿಸುತ್ತದೆ. ಹಾಸಿಗೆ ಚಿಕ್ಕದಾಗಿದ್ದಾಗ ನಾವು ಕಾಲನ್ನು ಮಡಿಸಿಕೊಂಡು ಮಲಗಬೇಕು. ಕಾಲು ಉದ್ದವಿದೆ ಎಂದು ಚಾಚಿದರೆ ಅದು ನೆಲಕ್ಕೆ ಬೀಳುತ್ತದೆ. ಇದರಂತೆಯೇ ನಮ್ಮ ಆದಾಯವು ಕಡಿಮೆಯಿದ್ದಾಗ ಆ ಆದಾಯಕ್ಕೆ ತಕ್ಕಂತೆ ನಮ್ಮ ಖರ್ಚನ್ನು ಅದಕ್ಕೆ ಸರಿದೂಗಿಸಿಕೊಂಡು ಹೋಗಬೇಕು. ಆದಾಯವನ್ನು ಮೀರಿ ಅಂದರೆ ಸಾಲ, ಕಂತು ಇತ್ಯಾದಿಗಳ ರೂಪದಲ್ಲಿ ಹಣ ಪಡೆದು ಖರ್ಚು ಮಾಡಿದರೆ, ಸಾಲವೆಂಬ ಶೂಲಕ್ಕೆ ಸಿಕ್ಕಿಕೊಂಡರೆ ಜೀವನದಲ್ಲಿ ಅನೇಕ ಕಷ್ಟ ಕೋಟಲೆಗಳಿಗೆ ಗುರಿಯಾಗಬೇಕಾಗಿ ಬರುತ್ತದೆ. ಆದುದರಿಂದ ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಉತ್ತಮ.
೬. ಅತಿ ಆಸೆ ಗತಿಗೇಡು.
ಉತ್ತರ:-“ಅತಿಆಸೆ ಗತಿಗೇಡು” ಎನ್ನುವುದು ಹಿರಿಯರ ಅನುಭವ ದಿಂದ ಬಂದ ಗಾದೆ ಮಾತುಗಳಾಗಿವೆ. ಹಿರಿಯರು ಹಲವಾರು ನೈಜ ಘಟನೆಗಳ ಮೂಲಕ ಕಿರಿಯರಿಗೆ ತಾನು ಕೇಳಿದ, ಅನುಭವಿಸಿದ ಮಾತುಗಳಿಂದ ತಿಳಿಸಿ ಹೇಳಿ ಮಾರ್ಗದರ್ಶನ ಮಾಡುತ್ತಿದ್ದರು.
ಮನುಷ್ಯನಿಗೆ ಆಸೆ ಇರಬೇಕು. ಆದರೆ ದುರಾಸೆಯಲ್ಲ, ಕೆಲವರು, ಸುಲಭವಾಗಿ ಹಣಸಂಪಾದಿಸಬಹುದೆಂದು ಕೆಲವರು ಚಿಟ್ಗಳಲ್ಲಿ ಒಂದು ತಿಂಗಳಲ್ಲಿ ಡಬಲ್ ಕೊಡುತ್ತೇವೆ ಎಂದು ಆಸೆ ತೋರಿಸುತ್ತಾರೆ. ಹಣಕಟ್ಟಿದ ದುರಾಸೆಗೆ ಬಲಿಗೆ ಬಿದ್ದವರಿಗೆ ಎಲ್ಲವನ್ನೂ ಕಳೆದು ಕೊಳ್ಳುವ ದುಸ್ಥಿತಿ ಬಹಳ ಹಿಂದೆ ರಾಜ್ಯದ ಲಾಟರಿ ಹಾವಳಿಗಳಿಂದ ದಿವಾಳಿಯಾದವರು ಎಷ್ಟೋ ಮಂದಿ.
ಆದ್ದರಿಂದ ಬುದ್ಧದೇವನು ಕೂಡ ಹೇಳಿದ್ದು ‘ಆಸೆಯೇ ದುಃಖಕ್ಕೆ ಮೂಲ‘ ಎಂದು, ಆದ್ದರಿಂದ ಯಾರೂ ಕೂಡ ಅತಿಆಸೆಗೆ ಬಲಿಯಾಗಬಾರದು ಎಂಬುದು ಈ ಗಾದೆಯಲ್ಲಿ ಬರುವ ನೀತಿಯಾಗಿದೆ.
೭. ಬೆಕ್ಕಿಗೆ ಚೆಲ್ಲಾಟ; ಇಲಿಗೆ ಪ್ರಾಣ ಸಂಕಟ.
ಉತ್ತರ:-ಒಬ್ಬರು ಕಷ್ಟಪಟ್ಟು, ಸಂಕಟಪಡುತ್ತಿದ್ದಾಗ ಮತ್ತೊಬ್ಬರು ಅವರನ್ನು ನೋಡಿ ನಗುತ್ತಿರುವ ಸಂದರ್ಭವನ್ನು ನೋಡಿ ಹಿರಿಯರು ಈ ಮೇಲ್ಕಂಡ ಗಾದೆಯನ್ನು ಈ ಸಂದರ್ಭದಲ್ಲಿ ಹೇಳಲಾಗಿದೆ.
ಯಾರಾದರೂ ಕಷ್ಟದಲ್ಲಿದ್ದಾಗ ನಾವು ಅವರಿಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕೆ ಹೊರತು ಅವರನ್ನು ನೋಡಿ ನಗುವುದು, ಗೇಲಿ ಮಾಡುವುದರಿಂದ ಅವರಿಗೆ ಮತ್ತಷ್ಟು ನೋವಾಗುವುದು, ಆದ್ದರಿಂದ ಈ ರೀತಿ ಮಾಡಬಾರದು ಎಂಬ ನೀತಿ ಇಲ್ಲಿದೆ. ಇದು ಮಾನವೀಯತೆಯ ಪ್ರವೃತ್ತಿಯೂ ಹೌದು.
೮. ಊಟಬಲ್ಲವನಿಗೆ ರೋಗವಿಲ್ಲ; ಮಾತು ಬಲ್ಲವನಿಗೆ ಜಗಳ ಇಲ್ಲ.
ಉತ್ತರ:-“ಊಟ ಬಲ್ಲವನಿಗೆ ರೋಗವಿಲ್ಲ; ಮಾತು ಬಲ್ಲವನಿಗೆ ಜಗಳವಿಲ್ಲ.” ಎಂಬುದು ಹಿರಿಯರು ಕಿರಿಯರಿಗೆ ಹೇಳಿದ ಕಿವಿ ಮಾತು ಈ ಗಾದೆಯಾಗಿದೆ. ಊಟ ಹಾಗೂ ‘ಮಾತು’ ಯಾವಾಗಲೂ ಹಿತವಾಗಿ-ಮಿತವಾಗಿ ಇರಬೇಕು. ‘ಊಟ’ ತುಂಬಾ ರುಚಿಯಾಗಿ ಎಂದು ಅಳತೆ ಮೀರಿ ತಿನ್ನುವುದು ಹೆಚ್ಚಾದರೆ ಅಜೀರ್ಣವಾಗಿ ಆರೋಗ್ಯ ಹದಗೆಡುವುದು. ಇದೇ ರೀತಿ ತನಗೆ ಎಲ್ಲಾ ಗೊತ್ತು ಎಂದು ಅಹಂಕಾರದಿಂದ ದರ್ಪದಿಂದ, ಗರ್ವದಿಂದ ಮಾತನಾಡುವುದು. ಹಿರಿಯರ ಎದುರಿಗೆ ತನ್ನ ಪ್ರತಿಷ್ಠೆಯನ್ನು ತೋರುವುದು. ಆ ವ್ಯಕ್ತಿಯ ದುರಂಕಾರದ ಪ್ರತಿಷ್ಠೆಯಾಗಿರುತ್ತದೆ. ಎಲ್ಲರಿಗೂ, ಎಲ್ಲಾ ಸಮಯದಲ್ಲಿಯೂ ಸಂದರ್ಭದಲ್ಲಿಯೂ ಕೇಳಿಸುವ ಕೊಂಡು ಸುಮ್ಮನಿರುವ ತಾಳ್ಮೆ ಇರುವುದಿಲ್ಲ. ಕೆಲವೊಮ್ಮೆ ಇದು ದೊಡ್ಡ ಜಗಳಕ್ಕೂ ಕಾರಣವಾಗಬಹುದು. ಆದ್ದರಿಂದ ನಾವು ಯಾವಾಗ ಎಲ್ಲಿ ಎಷ್ಟು ಮಾತಾಡ ಬೇಕೆಂಬ ಅರಿವು ಇರಬೇಕು.
೯. ದೇಶ ಸುತ್ತಿ ನೋಡು; ಕೋಶ ಓದಿನೋಡು.
ಉತ್ತರ:-“ದೇಶಸುತ್ತಿನೋಡು; ಕೋಶ ಓದಿನೋಡು” ಎಂಬಗಾದೆಯ ಮಾತನ್ನು ಹಿರಿಯರು, ಹಿರಿಯ ಸಾಹಿತಿಗಳು, ಕವಿಗಳು, ಕಿರಿಯರಿಗೆ ಕೊಡುವ ಮಾಗದರ್ಶನವಾಗಿದೆ.
‘ಕೋಶ’ ಎಂದರೆ ಪುಸ್ತಕ, ಪುಸ್ತಕ ಓದುವುದರಿಂದ ನಮ್ಮ ಜ್ಞಾನ ಬೆಳೆಯುತ್ತದೆ. ಪುಸ್ತಕ ಓದಿ ಒಂದು ರಾಜ್ಯದ, ಹಳ್ಳಿಯ, ನೆರೆಹೊರೆ ರಾಜ್ಯಗಳ, ದೇಶ-ವಿದೇಶಗಳ ಭೌಗೋಳಿ ಕತೆ, ಸಂಸ್ಕೃತಿ ಭಾಷೆ, ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ, ಆರ್ಥಿಕ ಸ್ಥಿತಿ-ಗತಿಗಳನ್ನು ಓದಿ ತಿಳಿದು ಕೊಳ್ಳಬಹುದು, ಆದರೆ ನಾವು ಅವರ ಪ್ರದೇಶಕ್ಕೆ ಹೋಗುವುದರಿಂದ ಆ ಜನರ ಭಾಷೆ-ಉಡಿಗೆ-ತೊಡುಗೆ, ಅಲ್ಲಿನ ಪ್ರಕೃತಿ ಸೌಂದಯ್ಯ, ಅಲ್ಲಿನ ಹೊಳೆ, ಕೆರೆ, ನದಿ, ಬಯಲು ಪ್ರದೇಶ, ಮರಗಿಡಗಳು, ಹೂತೋಟಗಳು, ಅರಣ್ಯ ಮುಂತಾದವುಗಳನ್ನು ನೋಡುತ್ತಾ ನಮ್ಮನ್ನು ನಾವು ಮರೆತು ಬಿಡುತ್ತೇವೆ. ಈ ಸೌಂದರ್ಯಾ ಅನುಭವಿಸಿದಾಗಲೇ ಅದರ ಅನುಭವ, ಆಗ ನಮಗಾಗುತ್ತದೆ. ದೇಶಸುತ್ತುವುದು ಎಂದರೆ ಅಮೇರಿಕಾ, ಸಿಂಗಪೂರ್ ಎಂದೂ ಮಾತ್ರ ಅಲ್ಲ. ಪಕ್ಕದ ರಾಜ್ಯದ, ಪಕ್ಕದ ಜಿಲ್ಲೆಯ ಬಗ್ಗೆ ನಮಗೆ ಎಷ್ಟೋ ವಿಷಯಗಳು ತಿಳಿದಿರುವುದಿಲ್ಲ. ಅಷ್ಟೇ ಏಕೆ ಒಬ್ಬ ಕನ್ನಡಿಗ ಇಡೀ ಕರ್ನಾಟಕವನ್ನು ಸುತೀ ಬಂದರೆ ಸಾಕು, ಭಾಷಾ ವೈವಿದ್ಯ, ವಿವಿಧ ಸಂಸ್ಕೃತಿ, ಅವರ ಭಾಷೆ ನಡೆ- ನೊ ನುಡಿಗಳು, ಉಡುಗೆ-ತೊಡುಗೆಗಳ ಬಗ್ಗೆ ಏನೋ ಹಿತಕರವಾದ ಭಾವನೆ ಉಂಟಾಗಿ, ನಮ್ಮ ಕನ್ನಡನಾಡಿನ ವೈಶ್ಯಾಲತೆ ತಿಳಿದು ಬರುತ್ತದೆ. ಆದ್ದರಿಂದಲೇ, “ದೇಶ ಸುತ್ತಿನೋಡು, ಕೋಶ ಓದಿ ನೋಡು”, ಎಂಬ ಸತ್ಯಸಂಗತಿಯಾಗಿದೆ.
೧೦. ಉಪ್ಪಿಗಿಂತ ರುಚಿಯಿಲ್ಲ; ತಾಯಿಗಿಂತ ಬಂಧುವಿಲ್ಲ.
ಉತ್ತರ:-“ಉಪ್ಪು ಇಲ್ಲದೆ ನಾವು ಊಟ ಮಾಡುವ ಆಹಾರವು ಯಾವುದೇ ಸ್ವಲ್ವವೂ ರುಚಿಸುವುದಿಲ್ಲ, ಅಷ್ಟೇ ಏಕೆ ಅದನ್ನು ತಿನ್ನಲೂ ಸಹ ಸಾಧ್ಯಯಾವಾಗುವುದಿಲ್ಲ. ಅಂದರೆ ಉಪ್ಪು ಇಲ್ಲದೆ ರುಚಿಯೇ ಇಲ್ಲ ಎಂದು ಬಲ್ಲವರು, ಅನುಭವಿಗಳೆಲ್ಲರೂ ಹೇಳುವರು. ಉಪ್ಪಿನಷ್ಟೇ ಮಹತ್ವ ತಾಯಿಗೆ ಕೊಟ್ಟಿದ್ದಾರೆ. ಯಾವ ಬಂಧು-ಬಳಗದವರು ಯಾವು ಇಲ್ಲದಿದ್ದರೂ ಇರಬಹುದು, ಆದರೆ ‘ತಾಯಿ ಇಲ್ಲದಿದ್ದರೆ ಯಾವ ಬಂಧು ಬಳದಗವರು ಇದ್ದರೂ ಇಲ್ಲದೆಂತೆ, ತಾಯಿಯ ಕರುಳ ಬಳ್ಳಿಯ ಪ್ರೀತಿ, ವಾತ್ಸಲ್ಯ, ಬೇರೆ ಯಾವ ಬಂಧುಗಳಲ್ಲಿಯೂ ನೋಡಲು ಸಾಧ್ಯವಿಲ್ಲ. ಮಕ್ಕಳಿಗೆ ಸ್ವಲ್ಪ ನೋವಾದರೂ, ತಾಯಿಗೆ ತಕ್ಷಣ ಅರ್ಥವಾಗುತ್ತದೆ. ಮಕ್ಕಳ ನೋವು-ಸಂಕಟ ಬೇಗ ಅರ್ಥವಾಗುವುದೇ ಆ ತಾಯಿಗೆ, ಆದ್ದರಿಂದಲೇ ತಾಯಿ-ಮಕ್ಕಳ ಸಂಬಂಧ ಎಂದರೆ ಕರಳುಬಳ್ಳಿಯ ಸಂಬಂಧ, ಊಟಕ್ಕೆ ಉಪ್ಪು ಎಷ್ಟು ಅಗತ್ಯವಿದೆಯೋ, ಅಷ್ಟೇ ಮಕ್ಕಳಿಗೆ ತಾಯಿಯ ಅಗತ್ಯವಿದೆ. ಆದ್ದರಿಂದಲೇ “ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ” ಎಂಬುದು ಹಿರಿಯರ ಮಾತಿನ ಜೊತೆಗೆ ವೈಜ್ಞಾನಿಕ ಸತ್ಯವೂ ಹೌದು.
ಪಾಠ್ಯಾಧಾರ ಚಟುಚಟಿಕೆ
ಅ.ಕೊಟ್ಟಿರುವ ಪದ್ಯಭಾಗವನ್ನು ಕಂಠ ಪಾಠ ಮಾಡಿ:
ಜೈನರಾದ ಪೂಜ್ಯಪಾದ ಕೊಂಡ ಕುಂದವರ್ಯರ
ಮಧ್ವಯತಿಯೆ ಬಸವಪತಿಯೇ ಮುಖ್ಯ
ಮತಾಚಾರ್ಯರ
ಶರ್ವ ಪಂಪ ರನ್ನರ,
ಲಕ್ಷ್ಮೀಪತಿ ಜನ್ನರ,
ಷಟಕ್ಷರಿ ಮುದ್ದಣ್ಣರ,
ಪುರಂದರ ವರೇಣ್ಯರ,
ತಾಯೇ, ನಿನ್ನ ಬಸಿರೆ ಹೊನ್ನಗನಿ ವಿದ್ಯಾರಣ್ಯರ!