ಅಧ್ಯಾಯ–೨
ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ
ಅಭ್ಯಾಸಗಳು
I. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ.
1. ಮೊದಲನೇ ಆಂಗ್ಲೋ-ಮರಾಠ ಯುದ್ಧದ ಅಂತ್ಯದಲ್ಲಿ ಮರಾಠರು ಮತ್ತು ಬ್ರಿಟಿಷರ ಮಧ್ಯ ಸಾಲ್ಬಾಯ್ ಒಪ್ಪಂದ ಆಯಿತು.
2. ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವನು ಲಾರ್ಡ್ ವೆಲ್ಲಸ್ಲಿ.
3. ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿ ಕೊಂಡ ಗವರ್ನರ್ ಜನರಲ್ ಲಾರ್ಡ್ ಡಾಲ್ಹೌಸಿ.
4. ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ವೆಂಬ ನೀತಿಯನ್ನು ಜಾರಿಗೆ ತಂದವನು ಲಾರ್ಡ್ ಡಾಲ್ಹೌಸಿ.
II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ.
5. ಮೊದಲನೇ ಆಂಗ್ಲೋ–ಮರಾಠ ಯುದ್ಧಕ್ಕೆ ಕಾರಣಗಳನ್ನು ವಿವರಿಸಿ.
ಉತ್ತರ:- ಬಕ್ಸಾರ್ ಕದನದಲ್ಲಿ ಸೋತು ಬ್ರಿಟಿಷರ ಆಶ್ರಯದಲ್ಲಿದ್ದ ಮೊಘಲ್ ಚಕ್ರವರ್ತಿ ಎರಡನೇ ಷಾ ಆಲಂನನ್ನು ಮರಾಠರು ದೆಹಲಿಯ ಸಿಂಹಾಸನದಲ್ಲಿ ಕುಳ್ಳಿರಿಸಿದರು. ಆಗ ಚಕ್ರವರ್ತಿಯು ಬ್ರಿಟಿಷ್ರಿಗೆ ನೀಡಿದ್ದ ಕೋರ್ ಮತ್ತು ಅಲಹಾಬಾದ್ಗಳನ್ನು ಮರಾಠರಿಗೆ ಕೊಟ್ಟನು. ಇದರಿಂದ ಮರಾಠರು ಮತ್ತು ಬ್ರಿಟಿಷರ ನಡುವೆ ವೈರತ್ವವು ಮನೆ ಮಾಡಿತು. ಮರಾಠರ ಬಲಿಷ್ಠ ಪೇಶ್ವ ಮಾಧವರಾವ್ ಇದೇ ಸಮಯದಲ್ಲಿ ತೀರಿಕೊಂಡದ್ದು ಮರಾಠರಿಗೆ ತುಂಬಲಾರದ ನಷ್ಟವಾಯಿತು. ಪೇಳ್ವೆಯ ಸ್ಥಾನಕ್ಕೆ ಅವನ ತಮ್ಮ ನಾರಾಯಣರಾಯನು ಬಂದನಾದರೂ ಅವನನ್ನು ಅವನ ಚಿಕ್ಕಪ್ಪ ರಘುನಾಥರಾವ್ ನು ಕೊಲೆ ಮಾಡಿಸಿದನು. ಇದರಿಂದ ಪೇಶ್ವಯ ಸ್ಥಾನಕ್ಕೆ ಕಲಹ ಏರ್ಪಟ್ಟಿತು.
ನಾನಾ ಫಡ್ನವೀಸ್ನ ನೇತೃತ್ವದಲ್ಲಿ ಪೇಶ್ವ ಸ್ಥಾನಾಕಾಂಕ್ಷಿ ಯಾದ ರಘುನಾಥರಾವ್ ನ ಬದಲು ನಾರಾಯಣರಾಯನ ಮಗ ಏರಡನೇ ಮಾಧವರಾವ್ಗೆ ಮರಾಠ ಒಕ್ಕೂಟವು ಪಟ್ಟ ಕಟ್ಟಿತು. ಮರಾಠ ಮನೆತನಗಳಿಂದ ನಿರೀಕ್ಷಿತ ಬೆಂಬಲ ಸಿಗದ ರಘುನಾಥರಾವ್ ನು ಬ್ರಿಟಿಷರ ಬೆಂಬಲ ಕೋರಿದನು. ಬ್ರಿಟಿಷರು ಈ ಸಂದರ್ಭವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಯೋಚಿಸಿದರು. ಬ್ರಿಟಿಷರು ಮತ್ತು ಮರಾಠ ಒಕ್ಕೂಟಗಳ ನಡುವೆ 1775- 1782ರ ವರೆಗೆ ನಡೆದ ದೀರ್ಘ ಯುದ್ಧದಲ್ಲಿ ಮರಾಠರು ಪ್ರಾರಂಭಿಕ ಯಶಸ್ಸನ್ನು ಸಾಧಿಸಿದರೂ ಅಂತಿಮವಾಗಿ ಅಹಮದಾಬಾದ್ನ್ನು ಕಳೆದುಕೊಂಡರು. ಮರಾಠ ಒಕ್ಕೂಟವು ಯುದ್ಧ ಮುಂದುವರೆಸಲಾಗದೆ ಬ್ರಿಟಿಷ್ ರೊಂದಿಗೆ ಸಾಲ್ಬಾಯ್ ಒಪ್ಪಂದವನ್ನು ಮಾಡಿಕೊಂಡಿತು.
6. ಸಹಾಯಕ ಸೈನ್ಯ ಪದ್ಧತಿಯ ನಿಬಂಧನೆಗಳಾವುವು? ವಿವರಿಸಿ.
ಉತ್ತರ:- ಭಾರತೀಯ ರಾಜ್ಯಗಳನ್ನು ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವ ಸಲುವಾಗಿ ಸಹಾಯಕ ಸೈನ್ಯ ಪದ್ಧತಿ ಎಂಬ ನೀತಿಯನ್ನು ವೆಲ್ಲಸ್ಲಿಯು 1798ರಲ್ಲಿ ಜಾರಿಗೆ ತಂದನು.ಸಹಾಯಕ ಸೈನ್ಯ ಪದ್ಧತಿಯು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಭಾರತೀಯ ರಾಜ್ಯಗಳ ನಡುವಿನ ಒಂದು ಸೈನ್ಯ ಒಪ್ಪಂದವಾಗಿದ್ದು, ಈ ಪದ್ಧತಿಯ ನಿಬಂಧನೆಗಳು ಹೀಗಿವೆ:
1. ಭಾರತೀಯ ರಾಜನು ಬ್ರಿಟಿಷ್ ಸೈನಿಕ ತುಕಡಿಯನ್ನು ತನ್ನ ರಾಜ್ಯದಲ್ಲಿ ಇರಿಸಿಕೊಳ್ಳಬೇಕು.
2. ಸೇನೆಯ ವೇತನ ಮತ್ತು ನಿರ್ವಹಣೆಯ ವೆಚ್ಚವನ್ನು ಸಂಬಂಧಪಟ್ಟ ರಾಜ್ಯವೇ ಭರಿಸಬೇಕು. ಇಲ್ಲವೇ ನಿರ್ದಿಷ್ಟ ಕಂದಾಯ ಪ್ರದೇಶವನ್ನು ಬಿಟ್ಟು ಕೊಡಬೇಕು.
3. ರಾಜನ ಆಸ್ಥಾನದಲ್ಲಿ ಬ್ರಿಟಿಷ್ ರೆಸಿಡೆಂಟ್ನನ್ನು ನೇಮಿಸಿ ಕೊಳ್ಳಬೇಕು.
4. ಬ್ರಿಟಿಷ್ರ ಅನುಮತಿ ಇಲ್ಲದೆ ಆಸ್ಥಾನದಲ್ಲಿ ಯಾವುದೇ ಯುರೋಪಿಯನ್ನರನ್ನು ನೇಮಿಸಿಕೊಳ್ಳುವಂತಿಲ್ಲ.
5. ಭಾರತದ ಯಾವುದೇ ರಾಜ್ಯಗಳೊಂದಿಗೆ ಯುದ್ಧ ಅಥವಾ ಸಂಧಾನ ಮಾಡಿಕೊಳ್ಳಬೇಕಾದರೆ ಗವರ್ನರ್ ಜನರಲ್ನ ಸಮ್ಮತಿ ಬೇಕು.
6. ಇದಕ್ಕೆ ಪ್ರತಿಯಾಗಿ ಕಂಪನಿಯು ಆ ರಾಜ್ಯಕ್ಕೆ ಆಂತರಿಕ ಮತ್ತು ಬಾಹ್ಯ ರಕ್ಷಣೆಯನ್ನು ಒದಗಿಸುವುದು.
7. ಈ ನೀತಿಯಿಂದ ಬ್ರಿಟಿಷ್ರ ಸೈನಿಕ ನಿರ್ವಹಣೆ ಸುಲಭವಾಯಿತು ಹಾಗೂ ಭಾರತೀಯ ರಾಜ್ಯಗಳನ್ನು ನಿಯಂತ್ರಣದಲ್ಲಿಡಲು ಮತ್ತು ರಾಜ್ಯಗಳನ್ನು ಆರ್ಥಿಕವಾಗಿ ತೀವ್ರ ಶೋಷಣೆಗೆ ಗುರಿ ಮಾಡಲಾಯಿತು.
7. ಮೂರನೇ ಆಂಗ್ಲೋ–ಮರಾಠ ಯುದ್ಧವನ್ನು ವಿವರಿಸಿ.
ಉತ್ತರ:- ಮೂರನೇ ಆಂಗ್ಲೋ-ಮರಾಠ ಯುದ್ದ (1817- 1818): ಮರಾಠರು ತಮ್ಮ ಘನತೆ ಮತ್ತು ಸ್ವಾತಂತ್ರವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿದರು. ಪೇಶ್ವ ಕೂಡ ಬ್ರಿಟಿಷರ ನಿಯಂತ್ರಣದಿಂದ ಮುಕ್ತಗೊಳ್ಳಲು ಹವಣಿಸು ತಿದ್ದನು. 1817ರಲ್ಲಿ ಪೇಶ್ವಯು ಪೂನಾದಲ್ಲಿ ಬ್ರಿಟಿಷ್ ರೆಸಿಡೆನ್ಸಿಯ ಮೇಲೆ ದಾಳಿ ನಡೆಸಿ ಸುಟ್ಟನು. ನಾಗಪುರದ ಅಪ್ಪಾಸಾಹೇಬ ಮತ್ತು ಮಲ್ಹಾರರಾವ್ ಹೋಳ್ಕರ್ ಕೂಡ ಬ್ರಿಟಿಷರ ವಿರುದ್ಧ ದಂಗೆ ಎದ್ದು ಸೋತರು. ಅಂತಿಮವಾಗಿ ಪೇಶ್ವೆ ಎರಡನೇ ಬಾಜಿರಾಯನು ಬ್ರಿಟಿಷರ ವಿರುದ್ಧ ೧೮೧೮ರಲ್ಲಿ ಕೋರೇಗಾವ್ ಮತ್ತು ಅಷ್ಟಿ ಯುದ್ಧಗಳಲ್ಲಿ ಸೋತು ಶರಣಾದನು. ಬ್ರಿಟಿಷರು ಪೇಶ್ವೆ ಪದವಿಯನ್ನು ರದ್ದುಗೊಳಿಸಿ ಬಾಜಿರಾಯನಿಗೆ ವಿಶ್ರಾಂತಿ ವೇತನ ನೀಡಿದರು. ಬದಲಿಗೆ ಶಿವಾಜಿಯ ವಂಶಸ್ಥ ಪ್ರತಾಪಸಿಂಹನನ್ನು ಸಣ್ಣ ರಾಜ್ಯ ಸತಾರಾದಲ್ಲಿ ಪ್ರತಿಷ್ಠಾಪಿಸಿ, ಮರಾಠರ ಸಾಂಪ್ರದಾಯಕ ಮುಖಂಡನಾಗಿಸುವ ಮೂಲಕ ಮರಾಠರ ಪ್ರತಿರೋಧವನ್ನು ನಿಗ್ರಹಿಸಿದರು.
8. ಬ್ರಿಟಿಷರ ಅಧಿಕಾರ ವಿಸ್ತರಣೆಗೆ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯು ಹೇಗೆ ಸಹಕಾರಿಯಾಯಿತು?
ಉತ್ತರ:- ಡಾಲಹೌಸಿಯು ತನ್ನ ವಿಸ್ತರಣ ನೀತಿಯನ್ನು ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ನೀತಿಯ (1848) ಮೂಲಕ ಸಾಧಿಸಿದನು. ಈ ನೀತಿಯ ಪ್ರಕಾರ, ‘ಯಾವುದೇ ಒಬ್ಬ ಭಾರತೀಯ ರಾಜನು ಮಕ್ಕಳಿಲ್ಲದೆ ಮೃತನಾದರೆ, ಅವನು ದತ್ತು ತೆಗೆದುಕೊಂಡಿದ್ದ ಪುತ್ರನಿಗೆ ಉತ್ತರಾಧಿಕಾರತ್ವದ ಹಕ್ಕಿರಲಿಲ್ಲ. ಅಂತಹ ರಾಜ್ಯಗಳನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿ ಕೊಳ್ಳಲಾಗುತ್ತಿತ್ತು. ಈ ನೀತಿಗೆ ಒಳಪಟ್ಟ ರಾಜ್ಯಗಳಲ್ಲಿ ಸತಾರಾ, ಜೈಪುರ್, ಸಂಬಲಪುರ, ಉದಯಪುರ, ಝಾನ್ಸಿ, ನಾಗಪುರ, ಮೊದಲಾದವುಗಳು ಪ್ರಮುಖವಾಗಿವೆ. ಈ ರಾಜ್ಯಗಳ ರಾಜರಿಗೆ ಮಕ್ಕಳಿಲ್ಲದಿರುವುದನ್ನು ಮೊದಲೇ ಅರಿತಿದ್ದ ಬ್ರಿಟಿಷ್ ಗವರ್ನರ್ ಜನರಲ್ನು ಈ ನೀತಿಯನ್ನು ರಾಜಕೀಯ ಅಸ್ತವಾಗಿ ಡೌಲಹೌಸಿ ಜಾರಿಗೊಳಿಸಿದನು. ತಡೆಯಿಲ್ಲದೆ ರಾಜಾಕ್ರಮಣದ ನಡೆಯಿಂದ ಭಾರತೀಯರು ಆಕ್ರೋಶ ಮತ್ತು ಬ್ರಿಟಿಷರ ವಿರುದ್ಧ ಬಂಡೇಳುವಂತೆ ಮಾಡಿತು.
9. ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ನೀತಿಗೆ ಒಳಪಟ್ಟ ರಾಜ್ಯಗಳು ಯಾವುವು?
ಉತ್ತರ:- ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ನೀತಿಗೆ ಒಳಪಟ್ಟ ರಾಜ್ಯಗಳಲ್ಲಿ ಸತಾರ, ಜೈಪುರ, ಸಂಬಲ್ಪುರ, ಉದಯಪುರ್, ಝಾನ್ಸಿ, ನಾಗಪುರ ಮೊದಲಾದವುಗಳು ಪ್ರಮುಖವಾದವುಗಳಾಗಿವೆ.