ರಾಜ್ಯಶಾಸ್ತ್ರ
ಅಧ್ಯಾಯ – ೬
ಸಾರ್ವಜನಿಕ ಆಡಳಿತ- ಒಂದು ಪರಿಚಯ
ಅಭ್ಯಾಸಗಳು
I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.
1. ಸಾರ್ವಜನಿಕ ಆಡಳಿತದ ಪಿತಾಮಹ ವುಡೋ ವಿಲ್ಸನ್
2. ಸಾರ್ವಜನಿಕ ಆಡಳಿತ ಪದವನ್ನು ಪ್ರಪ್ರಥಮ ಬಾರಿಗೆ ಬಳಸಿದವರು ಅಲೆಕ್ಸಾಂಡರ್ ಹ್ಯಾಮಿಲ್ಟನ್
3. ಕೇಂದ್ರ ಲೋಕಸೇವಾ ಆಯೋಗದ ಸದಸ್ಯರನ್ನು ರಾಷ್ಟ್ರಾಧ್ಯಕ್ಷರು ನೇಮಕ ಮಾಡುತ್ತಾರೆ.
4. ಸಂವಿಧಾನದ 315ನೇ ವಿಧಿಯು ರಾಜ್ಯ ಲೋಕಸೇವಾ ಆಯೋಗದ ಕುರಿತು ತಿಳಿಸುತ್ತದೆ.
II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿರಿ.
5. ಸಾರ್ವಜನಿಕ ಆಡಳಿತವು ಪ್ರಸ್ತುತ ಅತ್ಯಗತ್ಯವಾಗಿದೆ. ಚರ್ಚಿಸಿ.
ಉತ್ತರ:- ಮಾನವನ ಸರ್ವಾಂಗೀಣ ಅಭಿವೃದ್ಧಿ ಹಾಗೂ ಮಾನವ ಸಮಾಜದ ಅಳಿವು ಮತ್ತು ಉಳಿವು ಸಾರ್ವಜನಿಕ ಆಡಳಿತವನ್ನು ಅವಲಂಬಿಸಿದೆ. ಸಂಕೀರ್ಣ ಮತ್ತು ಶೀಘ್ರಗತಿಯ ಬದಲಾವಣೆಗಳಿಗೆ ಒಳಗಾಗುತ್ತಿರುವ ಆಧುನಿಕ ಸಮಾಜದಲ್ಲಿ ಇಂದು ಸಾರ್ವಜನಿಕ ಆಡಳಿತವು ಪ್ರಮುಖ ಸ್ಥಾನವನ್ನು ಹೊಂದಿದೆ. ಸಾರ್ವಜನಿಕ ಆಡಳಿತದಿಂದ ಸಮಾಜಕ್ಕೆ ಆಗುವ ಪ್ರಯೋಜನಗಳ ಅರಿವು ಮತ್ತು ಮಹತ್ವವು ದಿನೇ ದಿನೇ ಹೆಚ್ಚುತ್ತಿದೆ. ಆಡಳಿತಾತ್ಮಕ ಪ್ರಯೋಗಗಳು ಮಾನವ ಸಮಾಜದಷ್ಟೇ ಪುರಾತನವಾದವು. ಆದರೆ ಸಾರ್ವಜನಿಕ ಆಡಳಿತದ ಅಧ್ಯಯನದ ಬೆಳವಣಿಗೆ ವಿಶೇಷವಾಗಿ ಅಮೆರಿಕಾದಲ್ಲಿ ಪ್ರಾರಂಭವಾಯಿತು.
ಪ್ರಸ್ತುತ ಸಾರ್ವಜನಿಕ ಆಡಳಿತವು ಎಲ್ಲಾ ರಾಷ್ಟ್ರಗಳಲ್ಲಿ ಒಂದು ಪ್ರಮುಖ ಅಧ್ಯಯನ ವಿಷಯವಾಗಿ ಹೊರಹೊಮ್ಮುತ್ತಿದೆ. ಆಡಳಿತ ಎಂದರೆ ಜನರಿಗೆ ಸೇವೆ ಸಲ್ಲಿಸುವ, ಜನರ ಬಗೆಗೆ ಕಾಳಜಿ ವಹಿಸುವ ಮತ್ತು ಜನರಿಗೆ ಸಂಬಂಧಿಸಿದ ವ್ಯವಹಾರ– ಗಳನ್ನು ನಿರ್ವಹಿಸುವ ಪ್ರಕ್ರಿಯೆಯಾಗಿದೆ. ‘ಸಾರ್ವಜನಿಕ ಆಡಳಿತ‘ ಎಂಬುದು ಆಡಳಿತ ಎಂಬ ವ್ಯಾಪಕ ಕ್ಷೇತ್ರದ ಒಂದು ನಿರ್ದಿಷ್ಟ ಭಾಗವಾಗಿದೆ. ಸಾರ್ವಜನಿಕ ಆಡಳಿತವೆಂಬುದು ಸಮಗ್ರ ಸರ್ಕಾರಿ ವ್ಯವಸ್ಥೆಯ ಸಮಸ್ತ ಕಾರ್ಯಾಚರಣೆಗೆ ಸಂಬಂಧಿಸಿದ್ದಾಗಿದೆ. ರಾಜ್ಯದ ದೈನಂದಿನ ವ್ಯವಹಾರಗಳನ್ನು ನಡೆಸಿಕೊಂಡು ಹೋಗುವ ಸರ್ಕಾರದ ಅಂಗವೇ ‘ಸಾರ್ವಜನಿಕ ಆಡಳಿತ‘ವಾಗಿರುತ್ತದೆ.
6. ಸಾರ್ವಜನಿಕ ಆಡಳಿತವು ವ್ಯಕ್ತಿಯ ಹುಟ್ಟಿನಿಂದ ಮರಣದವರೆಗೆ ವ್ಯಾಪಕವಾಗಿ ಕಾರ್ಯನಿರ್ವಹಿಸುತ್ತದೆ. ಸಮರ್ಥಿಸಿ.
ಉತ್ತರ:- ಮಾನವನ ಸರ್ವಾಂಗೀಣ ಅಭಿವೃದ್ಧಿ ಹಾಗೂ ಮಾನವ ಸಮಾಜದ ಅಳಿವು ಮತ್ತು ಉಳಿವು ಸಾರ್ವಜನಿಕ ಆಡಳಿತವನ್ನು ಅವಲಂಬಿಸಿದೆ. ಪೊಲೀಸ್ ರಾಜ್ಯದಿಂದ ಸುಖೀ ರಾಜ್ಯವಾಗಿ ಬದಲಾವಣೆಯಾಗುತ್ತಿರುವ ರಾಜ್ಯದ ಸ್ವರೂಪಕ್ಕೆ ಅನುಗುಣವಾಗಿ ಸಾರ್ವಜನಿಕ ಆಡಳಿತದ ಪ್ರಾಮುಖ್ಯತೆಯು ಹೆಚ್ಚುತ್ತಿದೆ. ವ್ಯಕ್ತಿಗಳೆಲ್ಲರೂ ಹುಟ್ಟಿನಿಂದ ಸಾಯುವವರೆಗೆ ಸಾರ್ವಜನಿಕ ಆಡಳಿತ ವ್ಯವಸ್ಥೆಗೆ ಒಳಪಟ್ಟಿರುತ್ತಾರೆ. ಇದು ರಾಜ್ಯ ವ್ಯವಸ್ಥೆಯ ಹೃದಯವಾಗಿದೆ. ಸಾರ್ವಜನಿಕ ಆಡಳಿತ ಇಲ್ಲದ ರಾಜ್ಯದ ಕಲ್ಪನೆಯೇ ಅಸಾಧ್ಯವಾಗಿದೆ. ಆದ್ದರಿಂದ ಆಧುನಿಕ ರಾಜ್ಯವನ್ನು ಆಡಳಿತಾತ್ಮಕ ರಾಜ್ಯ ಎಂದು ಪರಿಗಣಿಸಲಾಗಿದೆ.
ಸಾರ್ವಜನಿಕ ಆಡಳಿತವು ಸರ್ಕಾರದ ಆಧಾರ ಸ್ತಂಭವಾಗಿದೆ. ರಾಜ್ಯದಲ್ಲಿ ಶಾಸಕಾಂಗ ಹಾಗೂ ನ್ಯಾಯಾಂಗವಿಲ್ಲದ ಸರ್ಕಾರವನ್ನು ಊಹಿಸಬಹುದು. ಆದರೆ ಆಡಳಿತಾಂಗವಿಲ್ಲದ ಸರ್ಕಾರ ಅಥವಾ ರಾಜ್ಯವನ್ನು ಊಹಿಸಲೂ ಅಸಾಧ್ಯ. ಸಾರ್ವಜನಿಕ ನೀತಿಗಳನ್ನು ಕಾರ್ಯಗತಗೊಳಿಸಲು ಆಡಳಿತಾತ್ಮಕ ಯಂತ್ರ ಎಲ್ಲ ರಾಷ್ಟ್ರಗಳಲ್ಲಿಯೂ ಅತ್ಯವಶ್ಯಕ– ವಾಗಿರುತ್ತದೆ. ಹಾಗಾಗಿ ಪಾಲ್ಅಪಲ್ಬಿಯವರು “ಆಡಳಿತವಿಲ್ಲದ ಸರ್ಕಾರ ಕೇವಲ ಒಣ ಹರಟೆಯ ಕೂಟವಾಗುವುದು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಲು ಸೇವೆ ಸಲ್ಲಿಸುತ್ತಿದೆ. ಸಾರ್ವಜನಿಕ ಆಡಳಿತ ವ್ಯವಸ್ಥೆಯು ವ್ಯಕ್ತಿಯು ಗರ್ಭದಲ್ಲಿರುವಾಗಿನಿಂದ ಹಿಡಿದು ಅವನ ಮರಣದವರೆಗೂ ಅಗತ್ಯವಾದ ರೇಖೆಗಳನ್ನು ಒದಗಿಸುತ್ತದೆ. ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡಿ ಜನರ ಪ್ರಾಣ ಹಾಗೂ ಸ್ತ್ರೀಯ ರಕ್ಷಣೆ, ನ್ಯಾಯ ಒದಗಿಸುವುದು, ಶಿಕ್ಷಣ ನೀಡುವುದು, ಉದ್ಯೋಗಾವಕಾಶ ಕಲ್ಪಿಸುವುದು, ಆವಶ್ಯಕ ವಸ್ತುಗಳನ್ನು ಪೂರೈಸುವುದು, ದೇಶ ರಕ್ಷಣೆ, ಆರ್ಥಿಕ ಸಮಾನತೆಯನ್ನು ಉಂಟುಮಾಡುವುದು. ಮುಂತಾದ ಹಲವು ರೀತಿಯ ಸೇವೆಗಳನ್ನು ಒದಗಿಸುತ್ತಿದೆ.
7. ನೇಮಕಾತಿ ವಿಧಗಳ ಕುರಿತು ವಿವರಿಸಿ.
ಉತ್ತರ:-ಸಾರ್ವಜನಿಕ ಆಡಳಿತದ ಯಶಸ್ಸಿಗೆ ದಕ್ಷ ಸಿಬ್ಬಂದಿಯ ಅವಶ್ಯಕತೆ ಇರುತ್ತದೆ. ಈ ಸಿಬ್ಬಂದಿಯನ್ನು ಕ್ರಮಬದ್ಧ ರೀತಿಯಲ್ಲಿ ಆಯ್ಕೆ ಮಾಡಬೇಕಾಗುತ್ತದೆ ಆದ್ದರಿಂದ ‘ಸೂಕ್ತ ಹುದ್ದೆಗೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆಮಾಡುವ ಪ್ರಕ್ರಿಯೆಯೇ ನೇಮಕಾತಿ’ ಯಾಗಿದೆ.
ನೇಮಕಾತಿ ವಿಧಾನಗಳು: (ಎ) ಪ್ರತ್ಯಕ್ಷ ನೇಮಕಾತಿ, (ಬಿ) ಪರೋಕ್ಷ ನೇಮಕಾತಿ (ಪದೋನ್ನತಿ/ಬಡ್ತಿ ಮೂಲಕ ನೇಮಕಾತಿ)
ಪ್ರತ್ಯಕ್ಷ ನೇಮಕಾತಿ : ಪ್ರತ್ಯಕ್ಷ ನೇಮಕಾತಿಯನ್ನು ನೇರ ನೇಮಕಾತಿ ಎಂದೂ ಕರೆಯುತ್ತಾರೆ. ನೇರ ನೇಮಕಾತಿಯು ಜನಪ್ರಿಯ ಹಾಗೂ ವೈಜ್ಞಾನಿಕ ವಿಧಾನವಾಗಿದೆ. ಅರ್ಹ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನಿಶ್ಚಿತ ರೀತಿಯಲ್ಲಿ ಆಯ್ಕೆ ಮಾಡುವುದೇ ನೇರ ನೇಮಕಾತಿಯಾಗಿರುತ್ತದೆ. ನೇರ ನೇಮಕಾತಿಯ ಮೂಲಕ ಸೇವೆಗೆ ಸೇರಬೇಕಾದ ಅಭ್ಯರ್ಥಿಗಳು ಕೆಲವು ಸಾಮಾನ್ಯ ಮತ್ತು ವಿಶೇಷ ಅರ್ಹತೆಗಳನ್ನು ಹೊಂದಿರಬೇಕು. ಉದಾಹರಣೆಗೆ ನಾಗರಿಕ ಸೇವೆಗಳಿಗೆ ನಡೆಯುವ ನೇಮಕಾತಿ.
ಪರೋಕ್ಷ ನೇಮಕಾತಿ : ಪರೋಕ್ಷ ನೇಮಕಾತಿಯನ್ನು ಆಂತರಿಕ ನೇಮಕಾತಿ ಎಂದೂ ಕರೆಯುವರು. ಈಗಾಗಲೇ ಸರ್ಕಾರಿ ಸೇವೆಯ ಹುದ್ದೆಯಲ್ಲಿರುವವರನ್ನು ಅವರ ವಿದ್ಯಾರ್ಹತೆ ಮತ್ತು ಸೇವಾ ಹಿರಿತನದ ಆಧಾರದ ಮೇಲೆ ಮೇಲ್ದರ್ಜೆಯ ಹುದ್ದೆಗಳಿಗೆ ನೇಮಕ ಮಾಡುವುದೇ ಪರೋಕ್ಷ ನೇಮಕಾತಿ. ಇದೇ ಪದೋನ್ನತಿ ಮತ್ತು ಬಡ್ತಿಯ ವಿಧಾನವೂ ಆಗಿದೆ. ಇಂತಹ ಪದ್ಧತಿಯನ್ನು ಸಾಮಾನ್ಯವಾಗಿ ಎಲ್ಲಾ ರಾಷ್ಟ್ರಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಈ ಪದ್ಧತಿಯು ಭಾರತದಲ್ಲಿಯೂ ಜಾರಿಯಲ್ಲಿದೆ.
8. ಕಾನೂನು ಸುವ್ಯವಸ್ಥೆಯ ನಿರ್ವಹಣೆಯಲ್ಲಿ ರಾಜ್ಯದ ಪಾತ್ರವೇನು? ವಿವರಿಸಿ.
ಉತ್ತರ:- ‘ಕಾನೂನು’ ಮತ್ತು ‘ಸುವ್ಯವಸ್ಥೆ’ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಸರ್ವರ ಸಂರಕ್ಷಣೆಗೆ ಕಾನೂನಿನ ಆಡಳಿತ ಅಗತ್ಯವಾಗಿರುತ್ತದೆ. ಸಂವಿಧಾನದ 7ನೇ ಅನುಸೂಚಿಯ ಪ್ರಕಾರ ಕಾನೂನು ಸುವ್ಯವಸ್ಥೆಯನ್ನು ರಾಜ್ಯಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯದ ಮುಖ್ಯ ಕರ್ತವ್ಯಗಳಲ್ಲಿ ಒಂದಾಗಿದೆ. ಕೇಂದ್ರ ಸರ್ಕಾರವು ರಾಜ್ಯಗಳಿಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಿರ್ದೇಶನ ನೀಡುವ ಸಂವಿಧಾನಾತ್ಮಕ ಅಧಿಕಾರವನ್ನು ಹೊಂದಿದೆ. ಕೇಂದ್ರ ಸರ್ಕಾರ ಹೊಂದಿರುವ ಅಧಿಕಾರ, ಜವಾಬ್ದಾರಿ, ತಜ್ಞ ಸೇವೆ ಮುಂತಾದವುಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದರಲ್ಲಿ ರಾಜ್ಯ ಸರ್ಕಾರಗಳಿಗೆ ಮಾಹಿತಿ ಮತ್ತು ಮಾರ್ಗದರ್ಶನವನ್ನು ಸಂಬಂಧಪಟ್ಟ ಇಲಾಖೆಗಳ ಮೂಲಕ ನಿರಂತರವಾಗಿ ನೀಡಲಾಗುತ್ತದೆ.
ರಾಜ್ಯದ ಪಾತ್ರ-ರಾಜ್ಯ ಪೊಲೀಸ್ ವ್ಯವಸ್ಥೆ :
ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ರಾಜ್ಯ ಸರ್ಕಾರಗಳ ಪ್ರಾಥಮಿಕ ಜವಾಬ್ದಾರಿಯಾಗಿದೆ. ತಮ್ಮ ಜವಾಬ್ದಾರಿಯ ನಿರ್ವಹಣೆಗಾಗಿ ರಾಜ್ಯಗಳು ಕಾರ್ಯನಿರ್ವಹಣಾ ವರ್ಗ ಮತ್ತು ಸಲಹಾ ವರ್ಗಗಳಿಂದ ಕೂಡಿದ ಪೊಲೀಸ್
ಆಡಳಿತವನ್ನು ಹೊಂದಿವೆ. ರಾಜ್ಯಗಳಲ್ಲಿ ಪೊಲೀಸ್ ಖಾತೆಯು ರಾಜ್ಯ ಗೃಹಮಂತ್ರಿಯ ಅಧೀನದಲ್ಲಿರುತ್ತದೆ. ರಾಜ್ಯ ಗೃಹ- ಮಂತ್ರಿಯು ಪೊಲೀಸ್ ಆಡಳಿತಕ್ಕೆ ಸಂಬಂಧಪಟ್ಟ ಹೊಣೆಗಾರಿಕೆ ಯನ್ನು ಹೊಂದಿರುತ್ತಾರೆ. ಗೃಹ ಇಲಾಖೆಯ ಕಾರ್ಯದರ್ಶಿಯು ಭಾರತೀಯ ಆಡಳಿತ ಸೇವೆಯ (IAS) ಅಧಿಕಾರಿಯಾಗಿದ್ದು ಇವರು ಗೃಹ ಇಲಾಖೆಯ ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ.
ಇವರು ಗೃಹಮಂತ್ರಿಗೆ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಸಲಹೆ ಮತ್ತು ನೆರವು ನೀಡುತ್ತಾರೆ. ಗೃಹ ಇಲಾಖೆಯು ಪೊಲೀಸ್ ಆಡಳಿತದ ಮೇಲ್ವಿಚಾರಣೆ ಮತ್ತು ಸಂಯೋಜನೆಯ ಕಾರ್ಯವನ್ನು ನಿರ್ವಹಿಸುತ್ತದೆ. ಪೊಲೀಸ್ ವ್ಯವಸ್ಥೆಯು ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ ಹಾಗೂ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.