ಸಮಾಜಶಾಸ್ತ್ರ
ಅಧ್ಯಾಯ – 8
ಸಾಮಾಜಿಕ ಸ್ತರವಿನ್ಯಾಸ.
ಅಭ್ಯಾಸಗಳು
I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.
1. ಮಾನವಕುಲ ತಾನೊಂದೇ ವಲಂ ಎಂದು ಹೇಳಿದವರು ಆದಿಕವಿ ಪಂಪ.
2. ಅಸ್ಪೃಶ್ಯತೆ ಹಿಂದೂ ಸಮಾಜಕ್ಕೆ ಹತ್ತಿದ ಕಳಂಕ ಎಂದವರು ಮಹಾತ್ಮ ಗಾಂಧೀಜಿ.
3. ಅಸ್ಪೃಶ್ಯತಾ ಆಚರಣೆ ಶಿಕ್ಷಾರ್ಹ ಅಪರಾಧ ಎಂದು ಸಂವಿಧಾನದ 17ನೆಯ ವಿಧಿಯು ಘೋಷಿಸಿದೆ.
II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿರಿ.
4. ಸಾಮಾಜಿಕ ಸ್ತರ ವಿನ್ಯಾಸ ಎಂದರೇನು?
ಉತ್ತರ:- ಸಾಮಾಜಿಕ ಸ್ತರವಿನ್ಯಾಸವೆಂದರೆ “ಜನರನ್ನು ಆದಾಯ, ಶಿಕ್ಷಣ, ಜಾತಿ, ಬಣ್ಣ, ಲಿಂಗ, ಉದ್ಯೋಗ, ಬುದ್ಧಿಶಕ್ತಿ ಮೊದಲಾದವುಗಳ ಆಧಾರದ ಮೇಲೆ ಮೇಲು- ಕೀಳು ಎಂದು ವಿಂಗಡಿಸುವುದಾಗಿದೆ.”
5. ಸಾಮಾಜಿಕ ಸ್ತರ ವಿನ್ಯಾಸವು ಹೇಗೆ ಉಂಟಾಗಿದೆ?
ಉತ್ತರ:- ಸ್ತರವಿನ್ಯಾಸವು ಸಮಾಜದಿಂದ ನಿರ್ಮಿಸಲ್ಪಟ್ಟಿದೆ. ಸ್ತರ ವಿನ್ಯಾಸ ವ್ಯವಸ್ಥೆ ಪುರಾತನವಾದದ್ದು. ಮಾನವರು ಸಾಮುದಾಯಿಕ ಜೀವನ ಕ್ರಮವನ್ನು ಆರಂಭಿಸಿದಾಗಿನಿಂದಲೂ ಸಾಮಾಜಿಕ ಸ್ತರವಿನ್ಯಾಸ ಇದೆ. ಅಲೆಮಾರಿ ಜೀವನ ಪದ್ಧತಿಯಿಂದ ಹಿಡಿದು ಇಂದಿನ ಸಾಮಾಜಿಕ ಜೀವನದವರೆಗೂ ಸಾಮಾಜಿಕ ಸ್ತರವಿನ್ಯಾಸ ವ್ಯವಸ್ಥೆ ವಿವಿಧ ರೂಪಗಳಲ್ಲಿ ರೂಢಿಯಲ್ಲಿದೆ.
6. ಪೂರ್ವಾಗ್ರಹ ಎಂದರೇನು?
ಉತ್ತರ:- ಒಬ್ಬ ವ್ಯಕ್ತಿ ಅಥವಾ ಒಂದು ಸಮೂಹದವರ ಬಗ್ಗೆ ಹೊಂದಿರಬಹುದಾದ ಪೂರ್ವ ನಿರ್ಧಾರಿತ ಮನೋಭಾವನೆಯೇ “ಪೂರ್ವಾಗ್ರಹ” ಎನಿಸಿಕೊಳ್ಳುವುದು. ಸಮಾಜದಲ್ಲಿ ಮನುಷ್ಯರು ಸೃಷ್ಟಿಸಿಕೊಂಡಿರುವ ಅನೇಕ ನಿರ್ಮಿತ ಗಳಾದ ಜಾತಿ ತಾರತಮ್ಯ, ಲಿಂಗತಾರತಮ್ಯ, ಪ್ರಾದೇಶಿಕ ತಾರತಮ್ಯ, ಬಡವ-ಬಲ್ಲಿದ ಮೊದಲಾದ ರೀತಿಯ ತಾರತಮ್ಯಗಳು ಪೂರ್ವಾಗ್ರಹಕ್ಕೆ ಕಾರಣವಾಗಿವೆ. ಈ ಪೂರ್ವಾಗ್ರಹವು ಧನಾತ್ಮಕವಾಗಿಯೂ ಇರಬಹುದು, ಇಲ್ಲವೇ ಋಣಾತ್ಮಕವಾಗಿಯೂ ಇರಬಹುದು.
7. ಅಸ್ಪೃಶ್ಯತಾ ನಿವಾರಣೆಯ ಸಂವಿಧಾನಾತ್ಮಕ ಮತ್ತು ಶಾಸನಾತ್ಮಕ ಕ್ರಮಗಳಾವುವು? ವಿವರಿಸಿ.
ಉತ್ತರ:- ಸಂವಿಧಾನದ 17ನೆಯ ವಿಧಿಯು ಅಸ್ಪೃಶ್ಯತಾ ಆಚರಣೆಯನ್ನು ನಿಷೇಧಿಸಿದೆ.
ಭಾರತ ಸರ್ಕಾರ ‘ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ’ಯನ್ನು 1955ರಲ್ಲಿ ಜಾರಿಗೊಳಿಸಿದೆ. ಇದರಲ್ಲಿ ಕಂಡುಬಂದ ಕೆಲವು ಲೋಪ ದೋಷಗಳನ್ನು ತಿದ್ದುಪಡಿಮಾಡಿ ‘ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ’ ಎಂದು 1976ರಲ್ಲಿ ಮಾರ್ಪಾಡುಗೊಳಿಸಲಾಯಿತು. ಈ ಕಾಯ್ದೆಯ ಪ್ರಕಾರ ಅಸ್ಪೃಶ್ಯತೆಯ ಆಚರಣೆಯು ಶಿಕ್ಷಾರ್ಹ ಅಪರಾಧವಾಗಿರುತ್ತದೆ.
ಅಲ್ಲದೆ ಸಂವಿಧಾನಾತ್ಮಕವಾಗಿ ಸಾರ್ವತ್ರಿಕ ಮತದಾನದ ಹಾಗೂ ಸಮಾನತೆಯ ಹಕ್ಕನ್ನು ದೇಶದ ಎಲ್ಲಾ ನಾಗರಿಕರಿಗೂ ನೀಡಲಾಗಿದೆ.
ವಿಶೇಷವಾಗಿ ಪರಿಶಿಷ್ಟರನ್ನೊಳಗೊಂಡಂತೆ ಹಿಂದುಳಿದ ಜಾತಿಯವರಿಗೆ ಶೈಕ್ಷಣಿಕ, ರಾಜಕೀಯ, ಆರ್ಥಿಕ ಮತ್ತು ಉದ್ಯೋಗಾವಕಾಶಗಳಲ್ಲಿ ಮೀಸಲಾತಿಗಳನ್ನು ಕಲ್ಪಿಸಲಾಗಿದೆ.
1989ರ ಶಾಸನವು ಅಸ್ಪೃಶ್ಯತೆಯ ನಿರ್ಮೂಲನೆ ಕುರಿತಾದ ವಿಶೇಷ ಜವಾಬ್ದಾರಿಗಳನ್ನು ರಾಜ್ಯ ಸರ್ಕಾರಗಳಿಗೆ ವಹಿಸಿದೆ. ಹೀಗೆ, ಸ್ವತಂತ್ರ ಭಾರತವು ಅಸ್ಪೃಶ್ಯತೆಯ ನಿವಾರಣೆಗಾಗಿ ವಿಶೇಷ ಆಸಕ್ತಿ ವಹಿಸಿ ಎಲ್ಲಾ ನಾಗರಿಕರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಲು ಶ್ರಮಿಸುತ್ತಾ ಬಂದಿದೆ.
8. ಅಸ್ಪೃಶ್ಯತಾ ಆಚರಣೆಯಂತಹ ಸಾಮಾಜಿಕ ಪಿಡುಗನ್ನು ನಿವಾರಿಸಲು ನಿಮ್ಮ ಸಲಹೆಗಳೇನು?
ಉತ್ತರ:- ಅಸ್ಪೃಶ್ಯತೆಯು ಚಾತುರ್ವಣ್ರ, ವೇದಗಳ ಕಾಲದಿಂದಲೂ ಆರಂಭಗೊಂಡಿದೆ. ಇದು ಸಾಮಾಜಿಕ ವಿಭಜನಾ ವ್ಯವಸ್ಥೆ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಈ ವರ್ಣವ್ಯವಸ್ಥೆ ರೂಢಿಯಲ್ಲಿ ತಮ್ಮ ಕಾರ್ಯ ನಿರ್ವಹಿಸಬೇಕು ಎನ್ನುವ ಸಿದ್ದಾಂತ.ಶೂದ್ರರಿಗಿಂತ ಕೆಳಗಿನವನಾದ ಅಸ್ಪೃಶ್ಯರ ಸ್ಥಿತಿ ತುಂಬಾ ಕೆಳಮಟ್ಟದಲ್ಲಿತ್ತು. ಆರ್ಥಿಕ, ಸಾಮಾಜಿಕ ಅಸಮಾನತೆ, ಮೂಲ ಸೌಕರ್ಯದಿಂದ ವಂಚಿತರಾಗಿ ದಯನೀಯ ಸ್ಥಿತಿಗೆ ಒಳಪಟ್ಟವರಾಗಿದ್ದರು. ಅಸ್ಪೃಶ್ಯ ಎಂಬುದು ಮುಟ್ಟಬಾರದು, ಮುಟ್ಟಲಾಗದು ಎಂಬ ಅರ್ಥ, ಗಾಂಧೀಜಿಯವರ ಪ್ರಕಾರ, ‘ಅಸ್ಪೃಶ್ಯತೆ ಜಾತಿಯ ಅತ್ಯಂತ ತಿರಸ್ಕಾರಾರ್ಹವಾದ ಅಭಿವ್ಯಕ್ತಿ. ಇದು ಹಿಂದೂ ಸಮಾಜದ ಶರೀರವನ್ನು ಕುಷ್ಠರೋಗದ ಹುಣ್ಣಿನಂತೆ ಪೀಡಿಸುತ್ತದೆ’ ಎಂದರು. ಅವರಿಗೆ ಅತ್ಯಂತ ಕೆಳಮಟ್ಟದ ಸ್ಥಾನ ಮತ್ತು ಕೆಲಸ, ಮಲ ಹೊರುವ, ಬೀದಿ-ಚರಂಡಿ ಗುಡಿಸುವ ಹೀನ ವೃತ್ತಿಗಳನ್ನು ಮಾಡಬೇಕಾಗಿತ್ತು. ವೇದಗಳನ್ನು ಓದುವಂತಿರಲಿಲ್ಲ. ಕೇಳು ವಂತಿರಲಿಲ್ಲ. ಸಂಸ್ಕೃತ ಭಾಷೆ ಕಲಿಯುವಂತಿರಲಿಲ್ಲ. ಶಿಕ್ಷಣದಿಂದ ವಂಚಿತರಾಗಿ ಮೈಲಿಗೆಯ ಕಾರಣ ನೀಡಿ, ಕೆಳಜಾತಿ ಜನರಿಗೆ ಶೈಕ್ಷಣಿಕ ಸೌಲಭ್ಯಗಳಿಂದ ಹೊರಗಿಡಲಾಗಿತ್ತು.
ಅಸ್ಪೃಶ್ಯತೆಯ ಕಳಂಕವನ್ನು ತೊಡೆದು ಹಾಕಲು ಜ್ಯೋತಿಭಾ ಫುಲೆ, ಸ್ವಾಮಿ ವಿವೇಕಾನಂದ, ಡಾ.ಬಿ.ಆರ್. ಅಂಬೇಡ್ಕರ್ ಮೊದಲಾದವರು ತೀವ್ರ ಪ್ರಯತ್ನಪಟ್ಟರು. ಈ ರೀತಿ ಅಸ್ಪಶ್ಯ ಸಾಮಾಜಿಕ ಪಿಡುಗು ಎಂದು ಅದರ ಮಹತ್ವವನ್ನು ಮನಗಾಣಿಸುವ ಹೋರಾಟಕ್ಕೆ ಆದ್ಯತೆ ನೀಡಿ, ಸಾರ್ವಜನಿಕ ಮಹತ್ವ ಪಡೆದು ಯಶಸ್ಸು ಗಳಿಸಿದ ಡಾ. ಬಿ.ಆರ್. ಅಂಬೇಡ್ಕರ್ರು ‘ಸಂವಿಧಾನ ಶಿಲ್ಪಿ’ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇಷ್ಟಾದರೂ ಇದನ್ನು ಪೂರ್ಣ ಪ್ರಮಾಣದಲ್ಲಿ ಹೋಗಲಾಡಿಸಲು ಇನ್ನೂ ಸಾಧ್ಯವಾಗಿಲ್ಲ.